ಉಡುಪಿ : ಶಿಸ್ತು, ತಾಳ್ಮೆ, ದಕ್ಷತೆ ಹಾಗೂ ಬದ್ಧತೆಗೆ ಹೆಸರಾಗಿರುವ ಗೃಹರಕ್ಷಕರಿಗೆ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ದೈಹಿಕವಾಗಿ ಸದೃಢರಾಗಿ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಸೇವೆಯಲ್ಲಿ ತಂಡವಾಗಿ ಕೆಲಸ ಮಾಡಲು ಕ್ರೀಡೆ ಪ್ರೇರಣೆ ನೀಡಲಿದೆ ಎಂದು ಮಂಗಳೂರು ಯೆನೆಪೋಯ ವಿಶ್ವವಿದ್ಯಾಲಯ ಕುಲಪತಿ ಡಾ.ವಿಜಯ್ ಕುಮಾರ್ ಹೇಳಿದರು.
ಬುಧವಾರ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಗೃಹರಕ್ಷಕ ದಳ ವತಿಯಿಂದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಘಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಗೃಹ ರಕ್ಷಕ ದಳವು ಪೊಲೀಸ್ ಪಡೆಯ ಮತ್ತೊಂದು ಪ್ರಮುಖ ವಿಭಾಗವಾಗಿದೆ. ಗೃಹರಕ್ಷಕರು ಹಗಲು-ರಾತ್ರಿಯೆನ್ನದೇ ತುರ್ತು ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಕ್ರೀಡಾಕೂಟಗಳ ಆಯೋಜನೆ ಮನಸ್ಸಿಗೆ ಮುದ ನೀಡುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸರ್ವೇ ಸಾಮಾನ್ಯ. ಇಂದಿನ ಸೋಲು ಮುಂದಿನ ಗೆಲುವಿಗೆ ದಾರಿಯಾಗಲಿದೆ. ಪ್ರತಿಯೊಬ್ಬರು ಕ್ರೀಡೆಯನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಪು ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಪ್ರಶಾಂತ್ ಕುಮಾರ್ ಶೆಟ್ಟಿ, ವೈದ್ಯೆ ಡಾ.ಶ್ರುತಿ ಬಲ್ಲಾಳ, ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಡಾ.ರೋಶನ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ, ಚಿಕ್ಕಮಗಳೂರು, ಕಾರವಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗೃಹರಕ್ಷಕ ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಂದೀಪ್ ಚಿಕ್ಕಮಗಳೂರು ಕ್ರೀಡಾಂಗಣಕ್ಕೆ ಕ್ರೀಡಾಜ್ಯೋತಿ ತಂದರು. ಕ್ರೀಡಾ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಗೃಹರಕ್ಷಕದಳ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಸ್ವಾಗತಿಸಿ, ಬ್ರಹ್ಮಾವರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ ನಿರೂಪಿಸಿ, ಸ್ನೇಹ ಜಿ. ವಂದಿಸಿದರು.

