ಬೆಂಗಳೂರಿನಲ್ಲಿ ಪತಿಯ ಅಕ್ರಮ ಸಂಬಂಧ ಮತ್ತು ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ವಿವಾಹವಾದ ದಂಪತಿಗೆ ಒಂದು ಮಗು ಇದೆ. ಪತಿಯ ಕಿರುಕುಳದಿಂದ ಬೇಸತ್ತು ಪತ್ನಿ ನೇಣಿಗೆ ಶರಣಾಗಿದ್ದಾರೆ.
ಚಿನ್ನದಂಥ ಹೆಂಡ್ತಿ ಇದ್ದರೂ ಇನ್ನೊಬ್ಬಳ ಮೋಹಕ್ಕೆ ಪತಿರಾಯ ಬಿದ್ದಿದ್ದ. ಇದನ್ನು ಹೆಂಡ್ತಿ ಪ್ರಶ್ನೆ ಮಾಡಿದ್ದಕ್ಕೆ ಅವಳಿಗೆ ವರದಕ್ಷಿಣೆ ಕಿರುಕುಳ ಕೊಡೋಕೆ ಶುರು ಮಾಡಿದ್ದ. ಗಂಡ ಹಿಂಸೆಯಿಂದ ಬೇಸತ್ತ ಪತ್ನಿ ತನ್ನ ಪುಟ್ಟ ಹೆಣ್ಣುಮಗುವನ್ನು ಬಿಟ್ಟು ನೇಣಿಗೆ ಕೊರಳೊಡ್ಡಿರುವ ಘಟನೆ ಬೆಂಗಳೂರಿನ ಬಾಗಲಗುಂಟೆಯ ದಾಸರಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಮೂರು ವರ್ಷದ ಹಿಂದೆ ಮನೆಯವರ ನಿಶ್ಚಯದಂತೆ ನಂದೀಶ್ ಅವರನ್ನು ಪೂಜಶ್ರೀ ವಿವಾಹವಾಗಿದ್ದರು. ನಂದೀಶ್ ಹಾಗೂ ಪೂಜಶ್ರೀಗೆ ಒಂದು ಹೆಣ್ಣು ಮಗು ಕೂಡ ಇದೆ. ನಂದೀಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರೆ, ಪೂಜಶ್ರೀ ಕೂಡಾ ಖಾಸಗಿ ಬ್ಯಾಂಕ್ ನಲ್ಲಿ ಕ್ಯಾಷಿಯರ್ ಆಗಿ ವೃತ್ತಿ ಮಾಡುತ್ತಿದ್ದರು. ಮದುವೆಯಾದ ಒಂದು ವರ್ಷದ ನಂತರ ನಂದೀಶ್ ಗೆ ಅಕ್ರಮ ಸಂಬಂಧ ಇರುವುದು ಪೂಜಶ್ರೀಗೆ ಗೊತ್ತಾಗಿದೆ. ಇದೇ ವಿಚಾರಕ್ಕೆ ಪೂಜಶ್ರೀ ಪದೇ ಪದೇ ಪ್ರಶ್ನೆ ಮಾಡುತ್ತಿದ್ದಳು. ಈ ವೇಳೆ ನಂದೀಶ್ ನಿಮ್ಮ ತಾಯಿ ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಜಗಳವಾಡುತ್ತಿದ್ದ ಎಂದು ಆರೋಪಿಸಲಾಗಿದೆ.

