ಉಡುಪಿ : ಪೂಜೆ, ದರ್ಶನ, ಸೇವೆ ಮನಸ್ಸು ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಶಾಸ್ತ್ರಗಳ ಬಗ್ಗೆ ಅರಿವಿಲ್ಲದ ಧ್ರುವ ಭಗವಂತನ ಸ್ಪರ್ಶ ಮಾತ್ರದಿಂದಲೇ ಮಹಾನ್ ಜ್ಞಾನಿಯಾಗಿದ್ದ. ಹೀಗಾಗಿ ದೇವರ ಕೃಪಾದೃಷ್ಟಿಗೆ ಪಾತ್ರರಾಗುವುದು ಜೀವನದ ಗುರಿಯಾಗಬೇಕು ಎಂದು ಇಸ್ಕಾನ್ ಆಡಳಿತ ಸಮಿತಿ ಸದಸ್ಯ ಹಾಗೂ ‘ಗೋವರ್ಧನ್ ಇಕೋ ವಿಲೇಜ್’ ನಿರ್ದೇಶಕ ಶ್ರೀ ಗೌರಂಗದಾಸ್ ಹೇಳಿದರು.
ಕೃಷ್ಣಮಠಕ್ಕೆ ಭೇಟಿ ನೀಡಿದ ಅವರು ಪರ್ಯಾಯ ಪುತ್ತಿಗೆ ಮಠದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹೆತ್ತವರು ಇಂದಿನ ಶಿಕ್ಷಣದ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದಾರೆ. ಪದವಿಗಳಿಂದ ಉದ್ಯೋಗ ಲಭಿಸುತ್ತಿದೆ. ಆದರೆ ಜೀವನದಲ್ಲಿ ಯಾವುದಾದರೂ ಸಂಕಷ್ಟ ಬಂದಾಗ ಮಕ್ಕಳು ಅದನ್ನು ಎದುರಿಸಲು ಅಸಮರ್ಥರಾಗಿದ್ದಾರೆ. ಇದಕ್ಕಾಗಿ ಗೀತೆ, ಉಪನಿಷತ್ಗಳ ಜ್ಞಾನವೂ ಅಗತ್ಯವಾಗಿದೆ. ಇಸ್ಕಾನ್ ಸಂಸ್ಥೆ 80 ಭಾಷೆಗಳಲ್ಲಿ 80 ಕೋಟಿ ಗೀತೆಯ ಪುಸ್ತಕ ವಿತರಿಸಿದೆ. ಈ ಮೂಲಕ ಕೃಷ್ಣ ಸಂದೇಶ ಪ್ರಸರಣ ಗುರಿ ಹೊಂದಿದೆ ಎಂದರು.
ಗೀತೆ ಜ್ಞಾನದ ಭಂಡಾರ. ಬೇಡ ವಿಚಾರಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ಕೋಟಿ ಗೀತಾ ಲೇಖನದಂತ ಮಹತ್ವದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಎನ್ಎಂಪಿಟಿ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪರ್ಯಾಯ ಮಠದಿಂದ ಗೌರಂಗದಾಸ್ ಅವರಿಗೆ ಮಧ್ವಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ವತಿಯಿಂದ ವಿದುಷಿ ಉಷಾ ಹೆಬ್ಬಾರ್ ನೇತೃತ್ವದಲ್ಲಿ ಕುಣಿತದ ಭಜನಾ ಪ್ರಾತ್ಯಕ್ಷಿಕೆ ನಡೆಯಿತು.