ಉಡುಪಿ: ನಗರಸಭೆ ಮತ್ತು ಮಲ್ಪೆ ಶ್ರೀ ಜ್ಞಾನ ಜ್ಯೋತಿ ಭಜನಾ ಮಂದಿರ ಸುವರ್ಣ ಸಂಭ್ರಮ ಸಮಿತಿ ಆಶ್ರಯದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಸೆ.13ರಂದು ಬೆಳಿಗ್ಗೆ 8.30ರಿಂದ ಸಂಜೆ 5 ರವರೆಗೆ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈಗಾಗಲೇ 100ಕ್ಕೂ ಅಧಿಕ ಕಂಪೆನಿಗಳು ನೋಂದಣಿ ಮಾಡಿಕೊಂಡಿವೆ. ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀೆ ಇದೆ. ಇದಕ್ಕಾಗಿ 75 ಕೌಂಟರ್ಗಳನ್ನು ತೆರೆಯಲಾಗುವುದು. ಜಿಲ್ಲೆಯಲ್ಲಿ ಶಿಕ್ಷಣ ಪಡೆದವರು ಬೇರೆಡೆಗೆ ಉದ್ಯೋಗಕ್ಕೆ ತೆರಳುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಉದ್ಯೋಗಮೇಳ ಹಮ್ಮಿಕೊಳ್ಳಲಾಗಿದೆ ಎಂದರು. ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ನಗರಸಭೆಯಿಂದ 2ನೇ ಬಾರಿಗೆ ಉದ್ಯೋಗ ಮೇಳ ನಡೆಯುತ್ತಿದ್ದು, ಕಳೆದ ವರ್ಷ ಬನ್ನಂಜೆಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ 1410 ಮಂದಿಗೆ ಉದ್ಯೋಗ ಲಭಿಸಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ಶ್ರೀ ಜ್ಞಾನ ಜ್ಯೋತಿ ಭಜನಾ ಮಂದಿರದ ಅಧ್ಯಕ್ಷ ಜ್ಞಾನೇಶ್ವರ ಕೋಟ್ಯಾನ್ ಉಪಸ್ಥಿತರಿದ್ದರು.