ಮಂಗಳೂರು : ಮಾನವೀಯ ಸೇವೆಯಲ್ಲಿ ತೊಡಗುವ ಸಂಘ ಸಂಸ್ಥೆಗಳಿಗೆ ಸಮಾಜದಲ್ಲಿ ಮನ್ನಣೆ ಇದೆ. ಪರರ ನೋವಿಗೆ ಸ್ಪಂದಿಸಿ ಕೈಲಾದ ನೆರವು ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ವೆನ್ಲಾಕ್ ಆಸ್ಪತ್ರೆಯ ಆರ್ಥೋ ಸರ್ಜನ್ ಡಾ.ಕೆ.ಆರ್.ಕಾಮತ್ ಹೇಳಿದರು.
ಅಪಘಾತದಲ್ಲಿ ಕಾಲು ಕಳೆದುಕೊಂಡ ಬೆಳ್ತಂಗಡಿಯ ಪದ್ಮಾವತಿ ಎಂಬವರಿಗೆ ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಸೋಮವಾರ ನಗರದ ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್‌ನಲ್ಲಿ ಉಚಿತವಾಗಿ ನೀಡಲಾದ ಕೃತಕ ಕಾಲು ವಿತರಿಸಿ ಅವರು ಮಾತನಾಡಿದರು.
ಮಂಗಳೂರು ಪ್ರೆಸ್ ಕ್ಲಬ್‌ನ ಸಮಾಜ ಸೇವಾ ಕಾರ್ಯದ ಅಂಗವಾಗಿ ಈ ವರ್ಷ ಒಟ್ಟು ಎರಡು ಮಂದಿಗೆ ಕೃತಕ ಕಾಲು ನೀಡಲಾಗಿದೆ ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ತಿಳಿಸಿದರು.
ಲಯನ್ಸ್ ಲಿಂಬ್ ಸೆಂಟರ್‌ನ ಮ್ಯಾನೇಜರ್ ಕೆ.ಸುರೇಶ್ ,ಪ್ರೆಸ್ ಕ್ಲಬ್‌ನ ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಖಜಾಂಜಿ ಪುಷ್ಪರಾಜ್.ಬಿ.ಎನ್, ಸದಸ್ಯೆ ಲಲಿತಾಶ್ರೀ ಪ್ರೀತಂ ಉಪಸ್ಥಿತರಿದ್ದರು.