ದಾನಿಗಳ ನೆರವಿನಿಂದ 10 ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ವಿತರಣೆ
ಬಂಟ್ವಾಳ : ಬಡ ಕುಟುಂಬಗಳನ್ನು ಗುರುತಿಸಿ ಆಹಾರ ಧಾನ್ಯದ ಕಿಟ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ವಗ್ಗ- ಕಾಡಬೆಟ್ಟು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು. ಸ್ಥಳೀಯ ದಾನಿಗಳು ಅಗತ್ಯ ಕಿಟ್ ಒದಗಿಸಿದ್ದು ಸ್ವಯಂಸೇವಕರಿಗೆ ಪ್ರೇರಣೆ ನೀಡಿದ್ದಾರೆ.
ಸದಾ ಒಂದಲ್ಲಾ ಒಂದು ಮಾನವೀಯ ಚಟುವಟಿಕೆಗಳನ್ನು ನಡೆಸುತ್ತಿರುವ ಬಂಟ್ವಾಳ ತಾಲ್ಲೂಕಿನ ವಗ್ಗ- ಕಾಡಬೆಟ್ಟು ಶೌರ್ಯ ತಂಡವು ಕಳೆದ ವರ್ಷ ಮೂರು ಬಡ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ನೀಡಿತ್ತು. ಪ್ರತಿ ವರ್ಷ ಬಡ ಕುಟುಂಬಗಳನ್ನು ಗುರುತಿಸಿ ಅಗತ್ಯ ಸಹಕಾರ ನೀಡುವ ಪ್ರಯತ್ನ ಮಾಡುತ್ತಿರುವ “ಶೌರ್ಯ” ತಂಡದ ಸ್ವಯಂಸೇವಕರು ಈ ವರ್ಷವೂ ಬಡ ಕುಟುಂಬಗಳನ್ನು ಗುರುತಿಸಿ ಸಹಕಾರ ನೀಡುವ ನಿರ್ಧಾರ ಕೈಗೊಂಡಿದ್ದರು.
ಕೆಲವೇ ಕುಟುಂಬಗಳಿಗೆ ಸಹಾಯ ಮಾಡಬೇಕೆಂದು ಗುರಿ ನಿಗದಿಪಡಿಸಿದ್ದ ಇವರಿಗೆ ಇನ್ನೂ ಹೆಚ್ಚಿನ ಕುಟುಂಬಗಳಿಗೆ ನೆರವಾಗಬೇಕು ಎಂದು ಪ್ರೋತ್ಸಾಹ ನೀಡಿದವರು ಸ್ಥಳೀಯ ಗಣ್ಯರು, ಕೊಡುಗೈ ದಾನಿಗಳೂ ಆದ ಪ್ರಮೋದ್ ಕುಮಾರ್ ರೈ , ವೀರೇಂದ್ರ ಅಮೀನ್ , ಶ್ರುತಾಂಜನ್ ಜೈನ್ ಮತ್ತು ಸುಜಿತ್ ಕುಮಾರ್ ಜೈನ್ ರವರು. “ಶೌರ್ಯ” ತಂಡದ ಸೇವಾ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಇವರು ಬಡ ಕುಟುಂಬಗಳನ್ನು ಗುರುತಿಸಿದಲ್ಲಿ ಅವರಿಗೆ ನೀಡಲಾಗುವ ಆಹಾರ ಧಾನ್ಯದ ಕಿಟ್ ನ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದರು. ಈ ಪ್ರಕಾರ ಕಾಡಬೆಟ್ಟುವಿನ 9 ಕುಟುಂಬ ಹಾಗೂ ಆಲಂಪುರಿಯ ಒಂದು ಕುಟುಂಬವನ್ನು ಶೌರ್ಯ ತಂಡದ ಸ್ವಯಂಸೇವಕರು ಗುರುತಿಸಿ ದಾನಿಗಳು ನೀಡಿದ ಆಹಾರ ಧಾನ್ಯದ ಕಿಟ್ ನ್ನು ದಾನಿಗಳ ಉಪಸ್ಥಿತಿಯಲ್ಲಿ ಮನೆ ಮನೆಗೆ ತೆರಳಿ ವಿತರಣೆ ಮಾಡಿರುತ್ತಾರೆ.
ಬಡ ಕುಟುಂಬದ ರಮಣಿ, ಚೆಲ್ಲಮ್ಮ, ಸುಂದರಿ, ವಿನೋದಾ, ರುಕ್ಮಿಣಿ, ಮಮತ, ರಾಮಕ್ಕು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸುಲೋಚನ, ಗಿರಿಯಪ್ಪ ಪೂಜಾರಿ ಹಾಗೂ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡ ಒಂದು ಕುಟುಂಬದ ಅನಾಥ ಮಕ್ಕಳಿಗೆ ಕಿಟ್ ವಿತರಣೆ ಮಾಡಿದ್ದಾರೆ. ಆಹಾರ ಧಾನ್ಯದ ಕಿಟ್ ನಲ್ಲಿ 25 ಕೆ.ಜಿ ಅಕ್ಕಿ ಸೇರಿದಂತೆ 2500 ರೂಪಾಯಿ ಮೌಲ್ಯದ ಅಡುಗೆಯ ವಸ್ತುಗಳನ್ನು ನೀಡಿರುತ್ತಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಜಯಾನಂದ ಪಿ, ಘಟಕ ಪ್ರತಿನಿಧಿ ಪ್ರವೀಣ್, ಸಂಯೋಜಕಿ ರೇಖಾ.ಪಿ, ಸ್ವಯಂಸೇವಕರಾದ ಸಂಪತ್ ಶೆಟ್ಟಿ, ಮಹಾಬಲ ರೈ, ಜನಾರ್ದನ, ಮೋಹನಂದ, ಲಕ್ಷ್ಮಣ , ನಾರಾಯಣ ಪೂಜಾರಿ, ನಾರಾಯಣಶೆಟ್ಟಿ, ಅಶೊಕ ಬೊಲ್ಮಾರು ವಿನೋದ್, ಸಾವಿತ್ರ, ಶಶಿಕಲಾ, ಪವನ್ ಉಪಸ್ಥಿತರಿದ್ದರು. ಶೌರ್ಯ ಸ್ವಯಂಸೇವಕರ ಈ ಸೇವೆ ಪ್ರಶಂಸೆಗೆ ಪಾತ್ರವಾಗಿದೆ.