ಇದೊಂದು ಹೊಸತಾದ ಚಿಕಿತ್ಸಾ ವಿಧಾನವಾಗಿದ್ದು, ಹೆಚ್ಚಾಗಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಈ ಚಿಕಿತ್ಸಾ ಪದ್ಧತಿ ಮುಖಾಂತರ ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಶಕ್ತಿಯುತವಾಗಿ ಮಾಡಿ, ಕ್ಯಾನ್ಸರ್ ಕಾರಕ ಜೀವ ಕೋಶಗಳನ್ನು ಪತ್ತೆ ಹಚ್ಚಿ, ಅದನ್ನು ನಾಶ ಮಾಡುವಂತೆ ಪ್ರಚೋದಿಸುತ್ತಾರೆ. ಹಲವಾರು ರೀತಿಯ ಕ್ಯಾನ್ಸರ್‍ಗಳ ಚಿಕಿತ್ಸೆಯಲ್ಲಿ ಇದನ್ನು ಬಳಸುತ್ತಾರೆ. ಇಮ್ಯುನೋಥೆರಫಿಯನ್ನು ಮಾತ್ರ ಕೆಲವೊಮ್ಮೆ ಕಿಮೋಥೆರಪಿ ಜೊತೆಗೆ ಅಥವಾ ಇನ್ನಾವುದೇ ಕ್ಯಾನ್ಸರ್ ಚಿಕಿತ್ಸೆ ಜೊತೆಗೂ ಬಳಸುತ್ತಾರೆ. ಕೆಲವೊಂದು ವ್ಯಕ್ತಿಗಳಲ್ಲಿ ಧನಾತ್ಮಕ ಫಲಿತಾಂಶ ನೀಡುತ್ತದೆ ಮತ್ತು ಕೆಲವೊಬ್ಬರಿಗೆ ಯಾವುದೇ ಪರಿಣಾಮ ಬೀರದೇ ಇರಬಹುದು. ಒಟ್ಟಿನಲ್ಲಿ ಈ ಚಿಕಿತ್ಸಾ ಪದ್ಧತಿಯ ಯಶಸ್ಸಿನ ಅನುಪಾತ ಸುಮಾರು 15 ರಿಂದ 20 ಶೇಕಡಾ ಆಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಇಮ್ಯುನೋಥೆರಪಿಯನ್ನು ಮುಂದುವರಿದ ಹಂತದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಾತ್ರ ಬಳಸಲಾಗುತ್ತದೆ. ಸರ್ಜರಿ ಸಾಧ್ಯವಾಗದ ರೋಗಗಳಲ್ಲಿ ಅಥವಾ ಸರ್ಜರಿಯನ್ನು ಮಾಡಿಯೂ ಧನಾತ್ಮಕ ಫಲಿತಾಂಶ ದೊರಕದೆ ಇರಬಹುದಾದ ರೋಗಿಗಳಿಗೆ ಹೆಚ್ಚಾಗಿ ಈ ಚಿಕಿತ್ಸಾ ಪದ್ಧತಿಯನ್ನು ರೋಗ ನಿಯಂತ್ರಿಸಲು ಮತ್ತು ರೋಗ ಮತ್ತಷ್ಟು ಉಲ್ಬಣವಾಗದಿರಲಿ ಎಂಬ ಉದ್ದೇಶದಿಂದ ಹೆಚ್ಚು ಬಳಸಲಾಗುತ್ತದೆ. ಇಮ್ಯುನೋಥೆರಪಿಯಿಂದ ಪೂರ್ತಿಯಾಗಿ ಕ್ಯಾನ್ಸರ್ ರೋಗದಿಂದ ವಿಮುಕ್ತಗೊಳಿಸಲು ಸಾಧ್ಯವಿಲ್ಲ. ಆದರೆ ಕೆಲವೊಂದು ರೀತಿಯ ಕ್ಯಾನ್ಸರ್‍ಗಳಲ್ಲಿ ಆಶಾದಾಯಕ ಫಲಿತಾಂಶ ದೊರಕಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯೋಗಗಳು ಮತ್ತು ಪ್ರಾರಂಭಿಕ ಚಿಕಿತ್ಸೆಗಳು ನಡೆಯುತ್ತಿದ್ದು, ವೈದ್ಯರಿಗೆ ಮತ್ತು ಕ್ಯಾನ್ಸರ್ ರೋಗಿಗಳಿಗೆ ಒಂದಷ್ಟು ಆಶಾದಾಯಕ ದಾರಿಯನ್ನು ತೆರೆದಿದೆ.
ನಾಲ್ಕನೇ ಹಂತದ ಕ್ಯಾನ್ಸರ್ ಇರುವ ರೋಗಿಗಳಿಗೆ ಈ ಇಮ್ಯುನೋಥೆರಪಿಯಿಂದ ಉತ್ತಮ ಜೀವನ ಶೈಲಿ ಮತ್ತು ರೋಗದ ಲಕ್ಷಣಗಳಿಂದ ಒಂದಷ್ಟು ಮುಕ್ತಿ ದೊರಕಿರುವುದಂತೂ ನಿಜವಾದ ಮಾತು. ಹಾಗೆಂದ ಮಾತ್ರಕ್ಕೆ ಕಿಮೋಥೆರಪಿಗಿಂತ ಇಮ್ಯುನೋ ಥೆರಪಿ ಒಳ್ಳೆಯದು ಎಂಬರ್ಥವಲ್ಲ. ಕೆಲವೊಂದು ಅಡ್ಡ ಪರಿಣಾಮಗಳು ಕಿಮೋಥೆರಪಿಯನ್ನು ಜನರ ಇಷ್ಟ ಪಡದಂತೆ ಮಾಡಿದೆ. ಉದಾಹರಣೆಗೆ ಕೂದಲು ಉದುರುವಿಕೆ, ವಾಕರಿಕೆ, ರಕ್ತಕಣಗಳ ಸಂಖ್ಯೆ ವಿಪರೀತವಾಗಿ ಕಡಿಮೆಯಾಗುವುದು ಕಿಮೋಥೆರಪಿಯಲ್ಲಿ ಸರ್ವೆ ಸಾಮಾನ್ಯ. ಈ ವಿಚಾರಗಳನ್ನು ಹೋಲಿಸಿದಲ್ಲಿ ಇಮ್ಯುನೋಥೆರಪಿ, ಕಿಮೋಥೆರಪಿಗಿಂತ ಉತ್ತಮ ಎಂಬ ಅಭಿಪ್ರಾಯ ವೈದ್ಯರಲ್ಲಿ ಮತ್ತು ರೋಗಿಗಳಲ್ಲಿ ಇದೆ. ಆದರೆ ಯಾವ ರೀತಿಯ ಚಿಕಿತ್ಸೆ ಯಾವಾಗ ಹೇಗೆ ಕೊಡಬೇಕು ಎಂಬುದನ್ನು ವೈದ್ಯರು, ರೋಗಿಗೆ ಬಂದಂತಹಾ ಕ್ಯಾನ್ಸರ್ ರೋಗದ ಹಂತ, ಯಾವ ರೀತಿಯ ಕ್ಯಾನ್ಸರ್, ರೋಗಿಯ ವಯಸ್ಸು, ದೇಹ ಪ್ರಕೃತಿ ಇತ್ಯಾದಿಗಳನ್ನು ಗಮನಿಸಿಯೇ ನಿರ್ಧರಿಸುತ್ತಾರೆ.
ಎಲ್ಲಿ ಬಳಸುತ್ತಾರೆ
- ಯಕೃತ್ತಿನ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್
- ಮೂತ್ರ ಪಿಂಡದ ಕ್ಯಾನ್ಸರ್, ಮೂತ್ರ ಚೀಲದ ಕ್ಯಾನ್ಸರ್
- ಶ್ವಾಸಕೋಶ, ಬಾಯಿ ಮತ್ತು ಗಂಟಲು, ಹೊಟ್ಟೆ, ಗರ್ಭಾಶಯದ ಕ್ಯಾನ್ಸರ್
- ಮರುಕಳಿಸಿದ ಕ್ಯಾನ್ಸರ್ ಮತ್ತು ಕಿಮೋಥೆರಪಿ ಮಾಡಲು ಸಾಧ್ಯವಿಲ್ಲದ ಸಂದರ್ಭದಲ್ಲಿ.
ಈ ಎಲ್ಲಾ ಕ್ಯಾನ್ಸರ್ ಗಳಲ್ಲಿ ಆರಂಭಿಕ ಹಂತದಲ್ಲಿ ಅಂದರೆ ಸ್ಟೇಜ್ ಒಂದು ಮತ್ತು ಸ್ಟೇಜ್ ಎರಡರಲ್ಲಿ ಸರ್ಜರಿಯನ್ನು ಮುಖ್ಯ ಚಿಕಿತ್ಸಾ ಪದ್ಧತಿ ಯಾಗಿ ಬಳಸುತ್ತಾರೆ. ಆದರೆ ಮುಂದುವರಿದ 4ನೇ ಹಂತದಲ್ಲಿ ಈ ಇಮ್ಯುನೋಥೆರಪಿಯನ್ನು ಬಳಸುತ್ತಾರೆ.
ಯಾವುದು ಉತ್ತಮ:
ಕಿಮೋಥೆಯಪಿಯಲ್ಲಿ ಬಳಸುವ ಔಷಧಿಗಳು ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ಗುರುತಿಸಿ ನಾಶಪಡಿಸುತ್ತದೆ. ಇದರ ಜೊತೆಗೆ ಕೆಲವೊಮ್ಮೆ ಉತ್ತಮ ಜೀವಕೋಶಗಳು ಕೊಲ್ಲಲ್ಫಡುತ್ತದೆ. ಆದರೆ ಇಮ್ಯುನೋಥೆರಪಿಯಲ್ಲಿ ಕ್ಯಾನ್ಸರ್ ರೋಗಿಗಳ ದೇಹದ ರಕ್ಷಣಾ ವ್ಯವಸ್ಥೆಯನ್ನು ಸಧೃಡಗೊಳಿಸಿ ದೇಹವೇ ಕ್ಯಾನ್ಸರ್ ಜೀವಕೋಶಗಳನ್ನು ಎದುರಿಸಿ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಒಂದಕ್ಕಿಂತ ಇನ್ನೊಂದು ಉತ್ತಮ ಎಂಬುದಕ್ಕಿಂತ ಕೆಲವೊಮ್ಮೆ ಎರಡನ್ನು ಬಳಸಿ ರೋಗಿಯ ದೇಹಸ್ಥಿತಿಯನ್ನು ಉತ್ತಮಪಡಿಸಲಾಗುತ್ತದೆ. ಈ ಮೊದಲೆಲ್ಲಾ 4ನೇ ಹಂತದ ಕ್ಯಾನ್ಸರ್‍ಗಳಲ್ಲಿ (ಸರ್ಜರಿ ಮಾಡಲು ಸಾಧ್ಯವಿಲ್ಲದ ಹಂತ) ಕೇವಲ ಕಿಮೊಥೆರಪಿ ನೀಡಲಾಗುತ್ತಿತ್ತು. ಇದರಿಂದ ಬದುಕಿ ಉಳಿಯುವ ಸಾಧ್ಯತೆ ಕೆಲವು ತಿಂಗಳುಗಳಿಂದ ವರುಷದವರೆಗೆ ಸೀಮಿತವಾಗಿತ್ತು. ಈಗ ಹೊಸದಾಗಿ ವೈದ್ಯರ ಕ್ಯಾನ್ಸರ್ ಚಿಕಿತ್ಸೆ ಬತ್ತಳಿಕೆಯಿಂದ ಸೇರಿದ ಈ ಇಮ್ಯುನೋಥೆರಪಿಯಿಂದಾಗಿ ಕ್ಯಾನ್ಸರ್ ರೋಗಿಗಳು ಬದುಕಿ ಉಳಿಯುವ ಸಾಧ್ಯತೆಯನ್ನು ವರುಷಗಳ ವರೆಗೆ ವಿಸ್ತರಿಸಿದೆ. ಈ ಹೊಸ ಚಿಕಿತ್ಸಾ ಪದ್ಧತಿಯಿಂದ ಕ್ಯಾನ್ಸರ್ ನಿಯಂತ್ರಣ ಮತ್ತು ದೀರ್ಘಾವಧಿ ಜೀವನ ಹಾಗೂ ಬದುಕುಳಿಯುವಿಕೆ ಸಾಧ್ಯವಾಗಿದೆ. ಈ ಹಿಂದೆ ಇಮ್ಯುನೋಥೆರಪಿಯನ್ನು ಮರುಕಳಿಸಿದ ಕ್ಯಾನ್ಸರ್ ಮತ್ತು ಕಿಮೋಥೆರಪಿ ಸಾಧ್ಯವಾಗದಿದ್ದಾಗ ಅಥವಾ ಕಿಮೋಥೆರಪಿ ಕಾರ್ಯ ನಿರ್ವಹಿಸದೆ ಇದ್ದಾಗ ಬಳಸಲಾಗುತ್ತಿತ್ತು. ಈಗ ನಾಲ್ಕನೇ ಹಂತದ ಕೆಲವು ಕ್ಯಾನ್ಸರ್ ಗಳಲ್ಲಿ ಮೊದಲ ಆಯ್ಕೆಯ ಚಿಕಿತ್ಸೆಯಾಗಿಯೂ ಬಳಸುತ್ತಾರೆ. ಒಟ್ಟಿನಲ್ಲಿ ಕ್ಯಾನ್ಸರ್‍ಗೆ ಯಾವಾಗ ಯಾವ ರೀತಿ, ಹೇಗೆ ಎಲ್ಲಿ ಯಾವ ಚಿಕಿತ್ಸೆ ನೀಡುವುದು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ನುರಿತ ತಜ್ಞ ವೈದ್ಯರ ಮಾರ್ಗದರ್ಶನದಂತೆ ಈ ಚಿಕಿತ್ಸಾ ಪದ್ಧತಿಯನ್ನು ಅನುಸರಿಸಿದಲ್ಲಿ ಕ್ಯಾನ್ಸರ್ ಇದ್ದರೂ ಗುಣ ಪಡಿಸಲು ಮತ್ತು ಇತರರಂತೆ ಜೀವನ ನಡೆಸಲು ಸಾಧ್ಯವಿದೆ.
ಸಮಸ್ಯೆ ಏನು?
- ಇಮ್ಯುನೋಥೆರಪಿ ಚಿಕಿತ್ಸೆ ಬಹಳ ದುಬಾರಿ. ಆರೋಗ್ಯ ಮತ್ತು ಅನುಕೂಲ ಇದ್ದಲ್ಲಿ ಯಾವುದೇ ತೊಂದರೆ ಇಲ್ಲ. ಈ ಚಿಕಿತ್ಸೆಯಲ್ಲಿ ಪ್ರತಿ ಬಾರಿ ಚುಚ್ಚು ಮದ್ದನ್ನು ಹಾಕಿಸಿದಾಗ ಕನಿಷ್ಠ ಒಂದುವರೆ ಲಕ್ಷದಿಂದ ಐದು ಲಕ್ಷದವರೆಗೆ ಬೇಕಾಗಬಹುದು.ಕನಿಷ್ಠ 2 ರಿಂದ 3 ವಾರದ ಅಂತರದಲ್ಲಿ ಈ ಚುಚ್ಚು ಮದ್ದನ್ನು ನೀಡಲಾಗುತ್ತದೆ. ಸುಮಾರು ಒಂದರಿಂದ ಎರಡು ವರುಷಗಳ ವರೆಗೆ ಈ ಚುಚ್ಚುಮದ್ದನ್ನು ನಿರಂತರವಾಗಿ ಪಡೆಯಬೇಕಾಗುತ್ತದೆ.
- ಎಲ್ಲ ಕೇಂದ್ರಗಳಲ್ಲಿ ಈ ಚಿಕಿತ್ಸೆ ದೊರಕುವುದಿಲ್ಲ. ನುರಿತ ತಜ್ಞ ಮತ್ತು ಪರಿಣಿತ ವೈದ್ಯರ ಮಾರ್ಗದರ್ಶನದಲ್ಲಿ ಈ ಚುಚ್ಚು ಮದ್ದು ತೆಗೆದುಕೊಳ್ಳಬೇಕಾಗುತ್ತದೆ. ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಈ ಚಿಕಿತ್ಸೆ ಲಭ್ಯವಿದೆ.
- ಕಿಮೊಥೆರಪಿಯಷ್ಟು ಅಡ್ಡಪರಿಣಾಮ ಇಲ್ಲದಿದ್ದರೂ ಇಮ್ಯುನೋಥೆರಪಿಯಲ್ಲಿ ಕೆಲವೊಮ್ಮೆ ಥೈರಾಯ್ಡ್ ತೊಂದರೆ, ಚರ್ಮದಲ್ಲಿ ಗುಳ್ಳೆಗಳು, ಅತಿಸಾರ ಮುಂತಾದ ಸಮಸ್ಯೆ ಕಂಡುಬರುತ್ತದೆ.
- ಇಮ್ಯುನೋಥೆರಪಿ ಚಿಕಿತ್ಸೆ ನಿಲ್ಲಿಸಿದ ಬಳಿಕ ಕ್ಯಾನ್ಸರ್ ಜೀವಕೋಶಗಳು ಮತ್ತೆ ಕ್ರಿಯಾಶೀಲವಾಗುವ ಸಾಧ್ಯತೆ ಇರುತ್ತದೆ.
ಕೊನೆಮಾತು:
ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗಳು ಕ್ಯಾನ್ಸರ್ ಬಂದಿದೆ ಎಂದು ತಿಳಿದಾಗಲೇ ಅರ್ಧ ಜೀವ ಬಿಟ್ಟಿರುತ್ತಾರೆ ಮತ್ತು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲಬಹುದು. ಆದರೆ ನಮ್ಮ ಕನಸುಗಳನ್ನು, ಆಶೆಗಳನ್ನು ಆಕಾಂಕ್ಷೆ ಗೋಳನ್ನು ಮತ್ತು ಆತ್ಮ ವಿಶ್ವಾಸವನ್ನು ಕೊಲ್ಲಲು ಕ್ಯಾನ್ಸರ್ ಗೆ ಸಾಧ್ಯವಿಲ್ಲ ಎಂಬುದನ್ನು ಜನರು ಅರಿತುಕೊಳ್ಳಬೇಕು. ಇತ್ತೀಚಿನ ವರದಿಗಳ ಪ್ರಕಾರ ಆರಂಭಿಕ ಹಂತದ ಎದೆಗೂಡಿನ ಕ್ಯಾನ್ಸರ್ ಗೆ ಇಮ್ಯುನೋಥೆರಪಿ ನೀಡಿ 5 ವರ್ಷಗಳ ಬದುಕಿ ಉಳಿಯುವ ಅನುಪಾತ 80 ಶೇಕಡಾ ಆಗಿದೆ ಎಂಬುದು ಆಶಾದಾಯಕ ವಿಚಾರ. ಈ ಹಿಂದೆ ಎದೆಗೂಡಿನ ಕ್ಯಾನ್ಸರ್‍ಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಿಯೂ, ಬದುಕುಳಿಯುವ ಅನುಪಾತ 25 ರಿಂದ 65 ಶೇಕಡಾ ಆಗಿತ್ತು. ಈ ನಿಟ್ಟಿನಲ್ಲಿ ಇಮ್ಯುನೋಥೆರಪಿ ಜನರಲ್ಲಿ, ವೈದ್ಯರಲ್ಲಿ ಮತ್ತು ರೋಗಿಗಳಲ್ಲಿ ಹೊಸ ಆಶಾವಾದ ಮೂಡಿಸಿದೆ ಎಂದರೆ ತಪ್ಪಾಗಲಾರದು
ಡಾ|| ಮುರಲೀ ಮೋಹನ್‍ಚೂಂತಾರು MDS,DNB,MOSRCSEd(U.K), FPFA, M.B.A
ಮೊ : 9845135787 drmuraleechoontharu@gmail.com