ಉಸ್ತುವಾರಿ ಸಚಿವರ ಅನುದಾನ ಬಿಡುಗಡೆ ಹೇಳಿಕೆ ಜನರ ದಾರಿ ತಪ್ಪಿಸುವ ಕೆಲಸ : ಪ್ರಭಾಕರ ಪೂಜಾರಿ, ದಿನೇಶ್ ಅಮೀನ್ ಆಕ್ರೋಶ

0
180

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿಯ ಪರ್ಯಾಯ ಮಹೋತ್ಸವದ ಅಂಗವಾಗಿ ರಸ್ತೆ ದುರಸ್ತಿ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ರೂ.5 ಕೋಟಿ ಅನುದಾನ ಬಿಡುಗಡೆ ಮಾಡಿರುವುದಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ಜಿಲ್ಲೆಯ ಜನರಿಗೆ ತಪ್ಪು ಮಾಹಿತಿ ನೀಡಿದಂತಾಗಿದೆ ಎಂದು ಉಡುಪಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ ಮತ್ತು ಬಿಜೆಪಿ ಉಡುಪಿ ಬಿಜೆಪಿ ನಗರಾಧ್ಯಕ್ಷ ದಿನೇಶ್ ಅಮೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು-ನಾಲ್ಕು ವರ್ಷಗಳಿಂದ ಗಣಿ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನತೆ ಮರಳು, ಕೆಂಪು ಕಲ್ಲು, ಶಿಲೆ ಕಲ್ಲುಗಳ ಬಳಕೆಗೆ ಸಂಬಂಧಿಸಿದಂತೆ ಪಾವತಿಸಿದ ತೆರಿಗೆ ಹಣ ಜಿಲ್ಲೆಗೆ ಸಂಬಂಧಿಸಿದ ಮೊತ್ತವಾಗಿರುತ್ತದೆ. ಸದ್ರಿ ಒಟ್ಟುಗೂಡಿದ ಹಣವು ಜಿಲ್ಲೆಯ ಅಭಿವೃದ್ಧಿಗೆ ಬಳಸಬೇಕಾಗಿರುತ್ತದೆ. ಜಿಲ್ಲೆಗೆ ಬಳಸಬೇಕಾದ ಸಾರ್ವಜನಿಕರ ತೆರಿಗೆ ಹಣವನ್ನು ರಾಜ್ಯ ಸರಕಾರದಿಂದ ಪರ್ಯಾಯ ಮಹೋತ್ಸವಕ್ಕೆ ಅನುದಾನ ಬಿಡುಗಡೆ ಮಾಡಿರುವುದಾಗಿ ಸಚಿವರು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿರುತ್ತಾರೆ. ಗಣಿ ಇಲಾಖೆಯಲ್ಲಿ ಸಂಗ್ರಹವಾಗಿರುವ ರೂ.11 ಕೋಟಿ ರಾಜಧನದ ಪೈಕಿ ಉಡುಪಿ ಜಿಲ್ಲೆಯ ಇತರೆ ನಾಲ್ವರು ಶಾಸಕರು ಕೂಡಾ ಬಿಟ್ಟುಕೊಡುವ ಮೂಲಕ ಸಹಕರಿಸಿರುವುದರಿಂದ ರೂ.5 ಕೋಟಿ ಉಡುಪಿ ನಗರಕ್ಕೆ ಲಭಿಸಿದೆ.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಜಿಲ್ಲೆಯ ಶಾಸಕರುಗಳಾದ ವಿ.ಸುನೀಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಹಾಗೂ ಸುರೇಶ್ ಶೆಟ್ಟಿ ಗುರ್ಮೆ ಅವರ ಬಳಿ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ರಸ್ತೆಗಳ ಅಭಿವೃದ್ಧಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಮಾಡಿದ ಮನವಿಗೆ ಸ್ಪಂದಿಸಿ ಸಹಕಾರ ನೀಡಿದ ಪರಿಣಾಮ ಉಡುಪಿ ನಗರಕ್ಕೆ ಈ ಅನುದಾನ ಒದಗುವಂತಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜನರ ದಾರಿ ತಪ್ಪಿಸುವ ಕೆಲಸ ಬಿಟ್ಟು ಉಡುಪಿ ಜಿಲ್ಲಾಸ್ಪತ್ರೆಗೆ ಅನುದಾನ ತಂದು ಲೋಕಾರ್ಪಣೆಗೊಳಿಸುವ ಕೆಲಸ ಮಾಡಲಿ. ಅಲ್ಲದೇ ಕಳೆದ ಮೂರು ವರ್ಷಗಳಿಂದ ತೀರಾ ಹದಗೆಟ್ಟಿರುವ ಜಿಲ್ಲೆಯ ರಸ್ತೆಗಳ ದುರಸ್ತಿ ಹಾಗೂ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಸ್ವಂತ ಖಜಾನೆಯಿಂದ ಅನುದಾನ ತರುವ ಬಗ್ಗೆ ಶ್ರಮಿಸಲಿ ಎಂದು ಪ್ರಭಾಕರ ಪೂಜಾರಿ ಮತ್ತು ದಿನೇಶ್ ಅಮೀನ್ ಅವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಅಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here