ವರದಿ ÷ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ
ತುಳುನಾಡು:÷ಯಕ್ಷಗಾನದ ತೆಂಕುತಿಟ್ಟು ಶೈಲಿಯಲ್ಲಿ, ತಮ್ಮ ಕಂಚಿನ ಕಂಠ ಮತ್ತು ಅನನ್ಯ ಶೈಲಿಯಿಂದ ಆರು ದಶಕಗಳ ಕಾಲ ಕಲಾರಸಿಕರ ಹೃದಯದಲ್ಲಿ ಅಜರಾಮರರಾದವರು ದಿ. ಬಲಿಪ ನಾರಾಯಣ ಭಾಗವತರು. ಹಾಗೂ ಮಗ ಬಲಿಪ ಪ್ರಸಾದ ಭಾಗವತರ ಪುಣ್ಯ ಸ್ಮರಣೆ ಹಾಗೂ ಬಲಿಪ ದ್ವಯರಿಗೆ ಹಿಮ್ಮೇಳದಲ್ಲಿ ಸಾತ್ ನೀಡಿದ ಪೆರುವಾಯಿ ನಾರಾಯಣ ಭಟ್ಟ ಇವರಿಗೆ ಬಲಿಪ ಪ್ರಶಸ್ತಿ 2025 ಪ್ರಧಾನ ಸಮಾರಂಭವು ಎಕ್ಸೆಲೆಂಟ್ ಕಾಲೇಜಿನ ಸಾಂಸ್ಕೃತಿಕ ಸಭಾಂಗಣದಲ್ಲಿ ದೀಪ ಬೆಳಗುದರೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಗಿ, ನಂತರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದು ಬಳಿಕ ನಾಡಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದರ ಸಹಭಾಗಿತ್ವದಲ್ಲಿ ಗುರುದಕ್ಷಿಣೆ ಎಂಬ ತಾಳಮದ್ದಲೆ ಏರ್ಪಡಿಸಲಾಗಿತ್ತು.

ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಎಕ್ಸಲೆಂಟ್ ಸಂಸ್ಥೆಗಳ ಅಧ್ಯಕ್ಷರು ತಾನು ಬಲಿಪರ ಅಭಿಮಾನಿಯಾಗಿದ್ದು, ಈ ಕಾರ್ಯಕ್ರಮ ನಮ್ಮಲ್ಲಿ ನಡೆಯುತ್ತಿರುವುದು ನಮ್ಮ ಸೌಭಾಗ್ಯ ಎಂದು ನುಡಿದರು ಜೊತೆಗೆ ಸಾಂಸ್ಕೃತಿಕ ಕುಟುಂಬದಿಂದ ಬಂದ ಯಾವುದೇ ಮಗುವಿಗೆ ವಿದ್ಯಾಭ್ಯಾಸಕ್ಕೆ ಅವಕಾಶವಿದ್ದು, ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿ ಕಡೆಗೆ ಸಹಕಾರ ನೀಡಲಾಗುವುದು ಎಂದರು.
ಮುಖ್ಯ ಅತಿಥಿ ಅಭಯಚಂದ್ರ ಜೈನ್ ಮಾತನಾಡಿ ಯಕ್ಷಗಾನ ಕ್ಷೇತ್ರ ಸೇರಿದಂತೆ ಸಾಂಸ್ಕೃತಿಕ ರಂಗದಲ್ಲಿ ಸೇವೆ ನೀಡುವ ಕಲಾವಿದರಿಗೆ ಸರ್ಕಾರ ಇನ್ನಷ್ಟು ಹೆಚ್ಚಿನ ಸಹಕಾರ ನೀಡಬೇಕಿದೆ ಎಂದರು.
ಉದ್ಯಮಿ ಶ್ರೀಪತಿ ಭಟ್ ಮಾತನಾಡಿ ಬಲಿಪ ಕುಟುಂಬದೊಂದಿಗೆ ತಾನು ಹೊಂದಿರುವ ಭಾಂದವ್ಯದ ಸುಧೀರ್ಘ ಅವಧಿಯನ್ನು ನೆನಪಿಸುವುದರ ಜೊತೆಗೆ ಅವಿಭಜಿತ ಬಲಿಪ ಕುಟುಂಬ ಒಂದೇ ಮನೆಯಲ್ಲಿ ಇಂದಿಗೂ ವಾಸವಿದ್ದು ಇದು ಸಂಸಾರದ ಮಾದರಿ ಜೀವನ ಪರಂಪರೆ ಎಂದರು ಆಧುನಿಕ ಜೀವನ ಪದ್ಧತಿಯಲ್ಲಿ ಇದು ತೀರಾ ವಿರಳವಾಗಿದ್ದು ಇಲ್ಲಿ ಇನ್ನೂ ಜೀವಂತವಾಗಿದೆ ಎನ್ನುವುದು ಸಂತಸದ ವಿಚಾರ ಎಂದರು.
ಕೃಷ್ಣರಾಜ ಹೆಗ್ಡೆ ಮಾತನಾಡಿ ಬಲಿಪ ಕುಟುಂಬದ ಜೊತೆ ಸುಮಾರು 35 ವರ್ಷಗಳ ಭಾಂದವ್ಯವಿದ್ದು, ಕರಾಡ ಬ್ರಾಹ್ಮಣರಾದ ಬಲಿಪ ಕುಟುಂಬ, ಇವತ್ತು ಕರಾವಳಿ ಕರ್ನಾಟಕದಲ್ಲಿ ಯಕ್ಷಗಾನ ಎಂಬ ಕ್ಷೇತ್ರಕ್ಕೆ ಬಲಿಪ ಶೈಲಿ ಎಂಬ ಮಾರ್ಗದರ್ಶನ ಹಾಕಿಕೊಟ್ಟ ಮಹಾ ಪರಂಪರೆ ಇದೆ ಎಂದರು,
ಶ್ರೀಮತಿ ರಶ್ಮಿತಾ ಜೈನ್ ಮಾತನಾಡಿ ಬಲಿಪ ಕುಟುಂಬದ ಮಕ್ಕಳು ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಕಲಿಯುತ್ತಿದ್ದು ಉತ್ತಮ ವಿದ್ಯಾರ್ಥಿಗಳಾಗಿದ್ದು, ಸಾಂಸ್ಕೃತಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಸಾಧಿಸಲಿ, ಬಲಿಪ ಪೀಳಿಗೆಯ ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರದ ಮುಂದಿನ ಮಿನುಗು ನಕ್ಷತ್ರಗಳಾಗಲಿ ಎಂದು ಹಾರೈಸಿದರು.
ಪ್ರಶಸ್ತಿ ಪ್ರದಾನದ ಬಳಿಕ ‘ಗುರುದಕ್ಷಿಣೆ’ ತಾಳಮದ್ದಳೆಯು ಕಾರ್ಯಕ್ರಮದ ಮತ್ತೊಂದು ಆಕರ್ಷಣೆ. ‘ಬಲಿಪ’ ಶೈಲಿಯ ಭಾಗವತಿಕೆಯಲ್ಲಿ, ದಿಗ್ಗಜ ಕಲಾವಿದರ ಅರ್ಥಗಾರಿಕೆ ಮತ್ತು ಹಿಮ್ಮೇಳದ ಸಮನ್ವಯದಲ್ಲಿ ಈ ತಾಳಮದ್ದಳೆಯು ಜ್ಞಾನ ಮತ್ತು ಕಲೆಯ ಸಂಗಮವಾಗಿ ಪ್ರೇಕ್ಷಕರ ಮನ ತುಂಬಿ ಬಂತು.
ಕಾರ್ಯಕ್ರಮದಲ್ಲಿ ಬಲಿಪ ಕುಟುಂಬದ ಸರ್ವ ಸದಸ್ಯರು, ಬಂಧುಗಳು, ಹಿತೈಷಿಗಳು ಉಪಸ್ಥಿತರಿದ್ದರು.
ಸಭಾಂಗಣದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.
ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಡಾ. ವಾದಿರಾಜ ಕಲ್ಲೂರಾಯ , ಪ್ರಶಂಸ ಪತ್ರವನ್ನು ವಿಕ್ರಂ ನಾಯಕ್ ನೆರವೇರಿಸಿದರು, ಕಾರ್ಯಕ್ರಮಕ್ಕೆ ಎಕ್ಸಲೆಂಟ್ ಸಂಸ್ಥೆಯ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಸಹಕರಿಸಿದರು.

“ಬಲಿಪ ಪ್ರಶಸ್ತಿ – 2025” ಹಿರಿಯ ಯಕ್ಷಗಾನ ಕಲಾವಿದರಾದ ಮತ್ತು, ಬಲಿಪ ಕುಟುಂಬದ ಆತ್ಮೀಯರು ಆದ ಪೆರುವಾಯಿ ನಾರಾಯಣ ಭಟ್ಟರು ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಸ್ವೀಕರಿಸಿದ್ದು, ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು, ಸನ್ಮಾನ ಪತ್ರ, ಸ್ಮರಣಿಕೆ, ಪೇಟ, ಶಾಲು, ಹಾರ ಒಳಗೊಂಡಿದ್ದು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾರಾಯಣ ಭಟ್ಟರು ಬಲಿಪ ಕುಟುಂಬ ಮತ್ತು ತನ್ನ ಒಡನಾಟ, ಯಕ್ಷಗಾನದ ತಿರುಗಾಟ, ವಿವರಿಸುವುದರ ಜೊತೆಗೆ ಬಲಿಪ ಕುಟುಂಬಕ್ಕೆ ಹಾಗೂ ಎಕ್ಸಲೆಂಟ್ ಸಂಸ್ಥೆಗೆ ಅಭಿನಂದಿಸುವುದರ ಜೊತೆಗೆ ಧನ್ಯವಾದಗಳು ನೀಡಿದರು.

