ಎಸ್‌.ಸಿಎಸ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಕಲ್ಯಾಣ ಪರಿಷತ್ ವತಿಯಿಂದ ಹೊಸ ಸಂಘಟನೆಗಳು, ಕ್ಲಬ್‌ಗಳು ಮತ್ತು ಘಟಕಗಳ ಉದ್ಘಾಟನಾ ಕಾರ್ಯಕ್ರಮ

0
48

ಮಂಗಳೂರು :ವಿದ್ಯಾರ್ಥಿಗಳ ನಾಯಕತ್ವ, ಸೃಜನಶೀಲತೆ ಮತ್ತು ಸಮಗ್ರ ವ್ಯಕ್ತಿತ್ವಾಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಎಸ್‌.ಸಿಎಸ್‌ ಸಂಸ್ಥೆಯ ವಿದ್ಯಾರ್ಥಿ ಕಲ್ಯಾಣ ಪರಿಷತ್ ವತಿಯಿಂದ ಹೊಸ ಸಂಘಟನೆಗಳು, ಕ್ಲಬ್‌ಗಳು ಹಾಗೂ ಘಟಕಗಳಾದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಸೋಮವಾರ, ನವೆಂಬರ್ 10, 2025 ರಂದು ರಿವರ್‌ಸೈಡ್ ಕ್ಯಾಂಪಸ್‌ನ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ವಾರ್ಷಿಕ ವಿಷಯವಾದ “ಟುಗೆದರ್ ಫಾರ್ ಟ್ರಾನ್ಸ್ ಫಾರ್ಮೇಷನ್ (TTT)” “ಪರಿವರ್ತನೆಯ ಹಾದಿಯಲ್ಲಿ” ಬಿಡುಗಡೆಗೊಂಡಿತು. ಇದೇ ವೇಳೆ ಹೊಸದಾಗಿ ಆಯ್ಕೆಯಾದ ಉಪಾಧ್ಯಕ್ಷರು ಹಾಗೂ ವಿವಿಧ ಸಂಘಟನೆಗಳ ಕಾರ್ಯದರ್ಶಿಗಳನ್ನು ಪರಿಷತ್ತಿನಲ್ಲಿ ಅಧಿಕೃತವಾಗಿ ಒಳಗೊಳ್ಳಿಸಲಾಯಿತು. ಅವರಿಗೆ ಪ್ರಾಂಶುಪಾಲರಾದ ಶ್ರೀ ಹಾರ್ದಿಕ್ ಪಿ. ಚೌಹಾಣ್ ಅವರು ಜವಾಬ್ದಾರಿಯ ಪ್ರಮಾಣವಚನ ಬೋಧಿಸಿ, ಗುರುತು ಚಿಹ್ನೆ ವಿತರಿಸಿದರು.ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು “ನಾಯಕತ್ವ ಎಂದರೆ ಕೇವಲ ಸ್ಥಾನವಲ್ಲ, ಅದು ಹೊಣೆಗಾರಿಕೆಯೊಂದಿಗೆ ಬೆಳವಣಿಗೆಗೆ ದಾರಿ ತೋರಿಸುವ ಶಕ್ತಿ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮೊಳಗಿನ ಸೃಜನಶೀಲತೆಯನ್ನು ಅರಿತು, ಕಾಲೇಜಿನ ಹಾಗೂ ಸಮಾಜದ ಪರಿವರ್ತನೆಗೆ ಮುನ್ನಡೆಯಬೇಕು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ ಸಿ ಎಸ್‌ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಶ್ರೀ ಯು.ಕೆ. ಖಾಲಿದ್ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ, “ವಿದ್ಯಾರ್ಥಿಗಳು ಕಾಲೇಜಿನ ಹೃದಯಭಾಗವಾಗಿದ್ದಾರೆ. ನಿಮ್ಮ ಉತ್ಸಾಹ, ಶ್ರಮ ಮತ್ತು ನಿಷ್ಠೆಯೇ ಸಂಸ್ಥೆಯ ಪ್ರಗತಿಯ ಶಕ್ತಿ. “ಪರಿವರ್ತನೆಯ ಹಾದಿಯಲ್ಲಿ” ಎಂಬ ಈ ವಿಷಯವನ್ನು ಕೇವಲ ಮಾತಾಗಿಸದೆ, ಕೃತ್ಯಗಳ ಮೂಲಕ ಜೀವಂತಗೊಳಿಸಬೇಕು” ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

ಈ ಸಂದರ್ಭದಲ್ಲಿ ವಾಣಿಜ್ಯ , ನಿರ್ವಹಣಾ ,ವಿಜ್ಞಾನ ಮತ್ತು ಐಟಿ ವಿಭಾಗಗಳ ಅಂತರ್ ತರಗತಿ ‘ಉದ್ಭವ 2ಕೆ25’ ಹಾಗೂ ವಿದ್ಯಾರ್ಥಿಗಳ ನಿರ್ದೇಶನದಲ್ಲಿ ನಿರ್ಮಿತ ಬಹುಮಾನ ವಿಜೇತ ಕಿರುಚಿತ್ರ ‘SEE ME’ “ಸೀ ಮೀ” ಬಿಡುಗಡೆಗೊಂಡವು.
ಕಿರುಚಿತ್ರದ ನಿರ್ದೇಶಕರಾದ ಬಿ ಎಸ್ಸಿ ಅನಿಮೇಶನ್ ಉಪನ್ಯಾಸಕರಾದ ವಿಘ್ನೇಶ್ ಮಾತನಾಡಿ, “ಈ ಚಿತ್ರವು ವಿದ್ಯಾರ್ಥಿಗಳ ದೃಷ್ಟಿಕೋಣದಿಂದ ಸಮಾಜದ ಕೆಲವು ನಿಜವಾದ ವಿಷಯಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದೆ. ಇಂತಹ ವೇದಿಕೆಗಳು ನಮ್ಮ ಪ್ರತಿಭೆಯನ್ನು ಹೊರತರುವ ಅವಕಾಶ ಒದಗಿಸುತ್ತವೆ” ಎಂದು ಅಭಿಪ್ರಾಯಪಟ್ಟರು.
ಎಫ್ ಎನ್ ಡಿ ವಿಭಾಗದ ಮುಖ್ಯಸ್ಥರು,ಆಂತರಿಕ ಗುಣಮಟ್ಟದ ಭರವಸೆ ಕೋಶದ ಸಂಯೋಜಕರಾದ ರೂಪ ರಾವ್ ಕಾಲೇಜಿನ ವಾರ್ಷಿಕ ವಿಷಯ ಮಂಡನೆ ಮಾಡಿದರು. ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಅಧ್ಯಕ್ಷ ಸುದೀಪ್ ರೈ (ತೃತೀಯ ಬಿ.ಕಾಂ) ಮಾತನಾಡಿ, “ಯುವಕರ ಕೈಯಲ್ಲಿ ದೇಶದ ಭವಿಷ್ಯ ಇದೆ. ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ನಿಜವಾದ ಪರಿವರ್ತನೆ ಸಾಧ್ಯ” ಎಂದು ಹೇಳಿದರು.
ಗಣಕ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿ ಪರಿಷತ್ತಿನ ಸಂಯೋಜಕರಾದ ಶ್ರೀ ಮಾಧವ.ಕೆ ಸ್ವಾಗತ ಭಾಷಣ ಮಾಡಿದರು. ವಿದ್ಯಾರ್ಥಿ ಕಲ್ಯಾಣ ಪರಿಷತ್ ಉಪಾಧ್ಯಕ್ಷೆ ಕು.ಜಾಯ್ಲಿನ್ ರೋವೆನಾ ಪಿಂಟೋ ವಂದಿಸಿದರು. ವಿದ್ಯಾರ್ಥಿ ಪರಿಷತ್ತಿನ ಸಂಯೋಜಕರಾದ ಶ್ರೀಮತಿ ಅಶ್ವಿನಿ.ಎಸ್ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ವರ್ಷಾ ವಿ. ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here