ವಾಗ್ಳೆ ಕುಟುಂಬಸ್ಥರ ಸಮಾಜಮುಖಿ ಕಾರ್ಯಕ್ಕೆ ಅತಿಥಿಗಳಿಂದ ಶ್ಲಾಘನೆ
ಕಾರ್ಕಳ : ಶ್ರೀಮತಿ ಜಲಜ ಮತ್ತು ಶ್ರೀ ಗೋವಿಂದ ವಾಗ್ಳೆ ಸ್ಮರಣಾರ್ಥ ಅವರ ಸುಪುತ್ರರು ಉಡುಪಿ ಗೀತಾoಜಲಿ ಸಮೂಹ ಉದ್ಯಮ ಸಂಸ್ಥೆಗಳ ಪಾಲುದಾರರಾದ , ರಾಮಕೃಷ್ಣ ವಾಗ್ಳೆ, ಲಕ್ಷ್ಮಣ ವಾಗ್ಳೆ, ರಮೇಶ್ ವಾಗ್ಳೆ , ಹರೀಶ್ ವಾಗ್ಳೆ, ಸಂತೋಷ್ ವಾಗ್ಳೆಯವರು ಕಾರ್ಕಳದ ಬೈಲೂರು ಕೆಳಪೇಟೆಯಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣವನ್ನು ಶಾಸಕ ವಿ. ಸುನೀಲ್ ಕುಮಾರ್ ಲೋಕಾರ್ಪಣೆಗೊಳಿಸಿದರು. ನಂತರ ಬೈಲೂರು ಶ್ರೀ ರಾಮ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ವಾಗ್ಳೆ ಕುಟುಂಬಸ್ಥರು ಬೈಲೂರು ಪರಿಸರದಲ್ಲಿ ನಿರಂತರ ಸೇವೆ ನೀಡುತ್ತಿರುವುದು ಪ್ರಶಂಸನೀಯ, ಉದ್ಯಮಿಗಳು, ಶ್ರೀಮಂತರು ಸಮಾಜ ಸೇವೆ ಮಾಡಬೇಕೆಂದಿಲ್ಲ ಆದರೆ ವಾಗ್ಳೆ ಕುಟುಂಬವು ಸಮಾಜಕ್ಕೆ ಉಪಕಾರವಾಗುವಂತೆ, ತಂದೆ ತಾಯಿಯ ಹೆಸರು ಶಾಶ್ವತ ನೆನಪಿಸುವಂತೆ ಸುಸಜ್ಜಿತ ಪ್ರಯಾಣಿಕರ ತಂಗುದಾಣ ನಿರ್ಮಿಸಿ ಆದರ್ಶರೇನಿ ಸಿಕೊಂಡಿದ್ದಾರೆ ಎಂದರು. ಶಾಂತಿ ಸಾಗರ ಅವರ ಉದ್ಯಮದ ಹೆಸರಿನಂತೆ ಅವರ ಕುಟುಂಬವು ಶಾಂತಿಯ ಸಾಗರದಂತಿದೆ ಎಂದು ಪ್ರಶಂಶಿಸಿದರು.
ಕಾರ್ಕಳವು ಸರಕಾರದ ಅನುದಾನಕ್ಕಿಂತ ದಾನಿಗಳ ದೇಣಿಗೆಯಿಂದ ಅಭಿವೃದ್ಧಿ ಕಂಡಿದೆ. ನೀರೆ ಬೈಲೂರು ಭಾಗದ ಅಭಿವೃದ್ಧಿಯಲ್ಲಿ ವಾಗ್ಳೆ ಕುಟುಂಬದ ಪಾಲು ದೊಡ್ಡದಿದೆ ಎಂದ ಅವರು ವಾಗ್ಳೆ ಕುಟುಂಬವು ಉದ್ಯಮದಲ್ಲಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ ಉಡುಪಿಯಲ್ಲಿ ಉದ್ಯಮವನ್ನು ಆರಂಭಿಸಿ ಈ ಭಾಗದಲ್ಲಿ ಆರ್ .ಕೆ ಸಹೋದರರು ಎಂದು ಹೆಸರುವಾಸಿಯಾಗಿದ್ದಾರೆ. ಹೋಟೆಲ್ ಉದ್ಯಮದ ಮೂಲಕ ಉತ್ತಮ ಆಹಾರವನ್ನು ಗ್ರಾಹಕರಿಗೆ ನೀಡಿ ಎಲ್ಲಾ ಉದ್ಯಮದಲ್ಲಿ ಯಶಸ್ಸನ್ನು ಕಂಡಿರುವ ವಾಗ್ಳೆ ಕುಟುಂಬಸ್ಥರು ಸಾಮಾಜಿಕ ಬದ್ಧತೆ ಇರಿಸಿಕೊಂಡು ಸಮಾಜಕ್ಕೆ ತನ್ನಿಂದಾದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಉದ್ಯಮದ ಮೂಲಕ ಹಲವಾರು ಕುಟುಂಬಗಳಿಗೆ ಅನ್ನದಾತರಾಗಿಯೂ ಇವರ ಸೇವೆ ಮಹತ್ವದ್ದು. ಇನ್ನಷ್ಟು ಸಮಾಜಮುಖಿ ಕೆಲಸಗಳು ನಡೆಯಲಿ ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಕೆರೆಯ ನೀರು ಕೆರೆಗೆ ಚೆಲ್ಲಿದಾಗ ಸಿಗುವ ಆನಂದ ಬೇರೆ ಎಲ್ಲೂ ಸಿಗಲ್ಲ . ಸಮಾಜದ ಋಣವನ್ನು ತೀರಿಸಬೇಕೆಂಬ ಮಹದಾಸೆಯೊಂದಿಗೆ ಸಮಾಜಕ್ಕೆ ವಾಗ್ಳೆ ಸಹೋದರರು ಸಹಕಾರ ನೀಡುತ್ತಿದ್ದಾರೆ ಎಂದರು.
ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಮಾತನಾಡಿ ಕಣ್ಣಿಗೆ ಕಾಣುವ ದೇವರು ತಂದೆ ತಾಯಿ. ಅವರನ್ನು ಸದಾ ಸ್ಮರಿಸಬೇಕೆನ್ನುವ ಉದ್ದೇಶ ಇರಿಸಿಕೊಂಡು ಅವರ ಹೆಸರಿನಲ್ಲಿ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸುವ ಮೂಲಕ ವಾಗ್ಳೆ ಕುಟುಂಬಸ್ಥರು ಸಮಾಜಕ್ಕೆ ಮಾದರಿಯಾಗಿದ್ದಾರೆ. ವಾಗ್ಲೆ ಕುಟುಂಬ ರಾಷ್ಟ್ರೀಯ ವಿಚಾರಧಾರೆವುಳ್ಳ ಕೂಡು ಕುಟುಂಬವಾಗಿದೆ ಎಂದರು
ಸಭೆಯ ಅಧ್ಯಕ್ಷತೆ ಯನ್ನು ನೀರೆ ಗ್ರಾ.ಪಂ. ಅಧ್ಯಕ್ಷ ಸಚ್ಚಿದಾನಂದ ಎಸ್. ಪ್ರಭು ವಹಿಸಿದ್ದರು.
ವೇದಿಕೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಗೋಕುಲ್‌ದಾಸ್ ನಾಯಕ್, ಸರಕಾರಿ ಪ.ಪೂ. ಕಾಲೇಜು, ಬೈಲೂರು ಪ್ರಾಂಶುಪಾಲರಾದ ಸೀತಾರಾಮ ಭಟ್, ನೀರೆ ಗ್ರಾ.ಪಂ. ಸದಸ್ಯ ಹೈದರಾಲಿ, ಪಳ್ಳಿ ಅಡಪಾಡಿ ಶ್ರೀ ಉಮಾಮಹೇಶ್ವರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಧರ್ಮದರ್ಶಿಗಳಾದ ಪುಂಡಲೀಕ ನಾಯಕ್, ನೀರೆ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ, ಉಡುಪಿ ಉಜ್ವಲ್ ಡೆವಲಪರ್ಸ್‌ನ ಪುರುಷೋತ್ತಮ ಶೆಟ್ಟಿ, ಕಾರ್ಕಳ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕಡಾರಿ ರವೀಂದ್ರ ಪ್ರಭು, ಉಡುಪಿ ಹೋಟೆಲ್ ತ್ರಿವೇಣಿಯ ಗಣಪತಿ ಶೆಣೈ ನೀರೆ ಕುದುರು, ಬೈಲೂರು ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷರಾದ ಸುಧೀರ್ ಹೆಗ್ಡೆ ನಾಯರ್ ಬೆಟ್ಟು, ಕಣಂಜಾರು ಬ್ರಹ್ಮಲಿಂಗೇಶ್ವರ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ವಿಕ್ರಂ ಹೆಗ್ಡೆ ಕಣಂಜಾರು, ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ನೀರೆ ರವೀಂದ್ರ ನಾಯಕ್, ಉದ್ಯಮಿ ಬೈಲೂರು ಸುಧೀರ್ ಹೆಗ್ಡೆ, ಉದ್ಯಮಿ ಬೈಲೂರು ಚಂದ್ರಶೇಖರ ಮಾಡ, , ರಾಕೇಶ್ ವಾಗ್ಳೆ, ಕಾರ್ತಿಕ್ ವಾಗ್ಳೆ, ನಿಶಾಂತ್ ವಾಗ್ಳೆ ಉಪಸ್ಥಿತರಿದ್ದರು.
ನೀರೆ ಗ್ರಾಮ ಪಂಚಾಯತ್ ವತಿಯಿಂದ ರಾಮಕೃಷ್ಣ ವಾಗ್ಳೆ ಯವರಿಗೆ ಸನ್ಮಾನಿಸಲಾಯಿತು. ಸಂತೋಷ್ ವಾಗ್ಳೆಯವರು ವಂದಿಸಿದರು. ಲಕ್ಷ್ಮೀಶ ವಾಗ್ಲೆ ಸ್ವಾಗತಿಸಿದರು. ಲಾವಣ್ಯ ಲಕ್ಷ್ಮಣ ವಾಗ್ಳೆ ಪ್ರಾರ್ಥಿಸಿದರು, ದಾಮೋದರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.