ಉಡುಪಿ ರೈಲು ನಿಲ್ದಾಣದ ಅಮೃತ ಭಾರತ ರೈಲು ನಿಲ್ದಾಣ ಯೋಜನೆಗಳ ಉದ್ಘಾಟನೆ

0
3

ಉಡುಪಿ : ಉಡುಪಿ ರೈಲು ನಿಲ್ದಾಣದ ಪ್ರಯಾಣಿಕರ ಬಹು ದಿನಗಳ ಬೇಡಿಕೆ ಈಡೇರಿದೆ. ಸುಮಾರು 2.40 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಪ್ರಯಾಣಿಕರ ಸೌಲಭ್ಯಗಳು ಜಿಲ್ಲಾಡಳಿತದ ಸಹಕಾರದೊಂದಿಗೆ ಲೋಕಾರ್ಪಣೆಗೊಂಡಿದೆ.

ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ಉಡುಪಿ ರೈಲ್ವೆ ನಿಲ್ದಾಣಕ್ಕೆ ಹೊಸ ಕಾಯಕಲ್ಪ ನೀಡಿ ಹೊಸ ಮೆರುಗಿನೊಂದಿಗೆ ಕರಾವಳಿ ಭಾಗದ ಜನರಿಗೆ ಲಭ್ಯವಾಗಲಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಉಡುಪಿ ರೈಲು ನಿಲ್ದಾಣ ಪರಿಸರದಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿ. ನಿರ್ಮಿಸಿದ ಪ್ರಯಾಣಿಕರ ಸೌಲಭ್ಯಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕರಾವಳಿ ಜಿಲ್ಲೆಗಳ ಎಲ್ಲ ರೈಲು ನಿಲ್ದಾಣಗಳ ಮೇಲ್ದರ್ಜೆಗಾಗಿ 100 ಕೋಟಿ ರೂ ಗಳ ಕಾಮಗಾರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅನುಮೋದನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಥಮ ಹಂತದ ಕಾಮಗಾರಿಗಳಲ್ಲಿ ಪ್ಲಾಟ್ ಫಾರ್ಮ್ 2 ಅನ್ನು 2.6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಹಿರಿಯ ನಾಗರಿಕರ ಅನುಕೂಲಕ್ಕಾಗಿ 3 ಲಿಫ್ಟ್ ಗಳನ್ನು ಅಳವಡಿಸಲಾಗುವುದು. ಬಾರಕೂರು-ಮುಲ್ಕಿ ರೈಲ್ವೆ ಪ್ಲಾಟ್ ಫಾರ್ಮ್ಗಳನ್ನು 4.28 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಪ್ರಸಕ್ತ ಆರ್ಥಿಕ ಸಾಲಿನಲ್ಲಿ 105 ಕೋಟಿ ರೂ. ವೆಚ್ಚದಲ್ಲಿ 10 ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ಕೇಂದ್ರದಿಂದ ಅನುಮೋದನೆ ದೊರೆಯಲಿದೆ ಎಂದರು.

ಮಂಗಳೂರಿನಿಂದ ಕಾರವಾರದವರೆಗೆ ದ್ವಿಪಥ ರೈಲ್ವೆ ಹಳಿಗಳು ಈಗಿನ ಅವಶ್ಯಕತೆಯಾಗಿದ್ದು, ಇದಕ್ಕಾಗಿ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸಚಿವರಿಗೆ ಸಲ್ಲಿಸಲಾಗುವುದು. ಇದರ ಜೊತೆಗೆ ಮಡಗಾಂವ್ – ಮಂಗಳೂರು ವಂದೇ ಭಾರತ್ ರೈಲನ್ನು ಮುಂಬೈವರೆಗೆ ಮತ್ತು ಬೆಂಗಳೂರು-ಮಂಗಳೂರು ರೈಲನ್ನು ಕಾರವಾರದವರೆಗೆ ವಿಸ್ತರಣೆ ಮಾಡಿದಲ್ಲಿ ಕರಾವಳಿಯ ಜನರಿಗೆ ಬಹಳ ಅನುಕೂಲವಾಗಲಿದ್ದು, ಈ ನಿಟ್ಟಿನಲ್ಲಿ ಕೊಂಕಣ ರೈಲ್ವೆಯೊಂದಿಗೆ ಸಮಾಲೋಚಿಸಿ ಅಡಚಣೆಗಳನ್ನು ನಿವಾರಿಸುವ ಹಾಗೂ ಉಡುಪಿ ರೈಲು ನಿಲ್ದಾಣಕ್ಕೆ ಶ್ರೀಕೃಷ್ಣ ರೈಲು ನಿಲ್ದಾಣ ಎಂದು ಹೆಸರಿಸಲು ಪ್ರಯತ್ನ ನಡೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಯಶ್‌ಪಾಲ್ ಎ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕೊಂಕಣ ರೈಲ್ವೆ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ, ಕಾರವಾರ ವಲಯ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here