ಉಡುಪಿ: ಮುಂದಿನ ಯುಗ ಗೀತೆ ಯುಗ. ಯೋಗದಂತೆ ಗೀತೆಯೂ ಜಗದ್ಯಾಪಿಯಾಗಲಿದೆ. ಬೇರೆ ಮತೀಯರೂ ಗೀತೆ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ. ಜಗತ್ತಿನಲ್ಲಿ ಭಗವದ್ಗೀತೆ ಬಗ್ಗೆ ಆದರ ಬೆಳೆಯುತ್ತಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ರಾಜಾಂಗಣದಲ್ಲಿ ಭಾನುವಾರ ಬೃಹತ್ ಗೀತೋತ್ಸವ ಅಂಗವಾಗಿ ನಡೆದ ಅಂತಾರಾಷ್ಟ್ರೀಯ ಗೀತಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಅನೇಕ ಮತಾನುಯಾಯಿಗಳು ತಮ್ಮ ಮತವನ್ನು ಅನುಸರಿಸದರೆ ಮಾತ್ರ ಸ್ವರ್ಗ ಸಿಗುತ್ತದೆ. ನಮ್ಮ ದೇವರನ್ನು ಪೂಜಿಸದಿದ್ದರೆ ಏಳಿಗೆ ಇಲ್ಲ ಎಂಬುದಾಗಿ ಹೇಳುತ್ತಾರೆ. ಆದರೆ ಗೀತೆಯಲ್ಲಿ ಪರಿತ್ರಾಣಾಯ ಹಿಂದೂನಾಂ ಎಂಬುದಾಗಿ ಉಲ್ಲೇಖಿಸಿಲ್ಲ. ಕೃಷ್ಣನ ಪ್ರಕಾರ ಜಗತ್ತಿನಲ್ಲಿ ದುಷ್ಟರು ಮತ್ತು ಶಿಷ್ಟರು ಎಂಬ ಎರಡು ಜಾತಿಗಳು ಮಾತ್ರ ಇವೆ. ದುಷ್ಟರಿಗೆ ಶಿಕ್ಷೆ ಮತ್ತು ಶಿಷ್ಟ ರಕ್ಷಣೆಯಾಗಬೇಕು ಎಂಬುದು ಕೃಷ್ಣನ ನಿಲುವು. ಹೀಗಾಗಿ ಗೀತೆ ಜಾತ್ಯತಿತವಾಗಿದೆ ಮತ್ತು ವಿಶ್ವಮಾನ್ಯವಾಗಿದೆ ಎಂದು ಹೇಳಿದರು.
ಅಮೇರಿಕ ಹಾರ್ವರ್ಡ್ ವಿಶ್ವ ವಿದ್ಯಾನಿಲಯದ ಫ್ರಾನ್ಸಿಸ್ ಕ್ಲೂನಿ , ಸೀಟನ್ ಹಾಲ್ ವಿವಿಯ ಪ್ರೊ. ಆ್ಯಲನ್ ಬ್ರಿಲ್, ಅಮೇರಿಕಾದ ವಿದ್ವಾಂಸ ಕೇಶವ ರಾವ್ ತಾಡಪತ್ರಿ, ಮಹೇಶ್, ಮಾಹೆ ವಿವಿ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಪುತ್ತಿಗೆ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು. ಯೋಗೀಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

