ಭಾರತ ನಾರಿಯರ ವಿಶ್ವಕಪ್ ಗೆಲುವಿನ ಕನಸು ಮೂರನೇ ಪ್ರಯತ್ನದಲ್ಲಿ ಸಾಕಾರಗೊಂಡಿದೆ. ಮುನ್ನುಗ್ಗಿ ಬಂದ ಎದುರಾಳಿ ದಕ್ಷಿಣ ಆಫ್ರಿಕಾವನ್ನು 52 ರನ್ನುಗಳಿಂದ ತಡೆದು ನಿಲ್ಲಿಸುವ ಮೂಲಕ ಹರ್ಮನ್ ಪ್ರೀತ್ ಕೌರ್ ತಂಡ ನೂತನ ಇತಿಹಾಸ ಬರೆದು ವನಿತಾ ಏಕದಿನ ಕ್ರಿಕೆಟಿನ ನೂತನ ಚಾಂಪಿಯನ್ ಎನಿಸಿಕೊಂಡು ಪಟ್ಟ ಅಲಂಕರಿಸಿತು.
ಆಸ್ಟ್ರೇಲಿಯವನ್ನು ಸೋಲಿಸಿದವರಿಗೆ ವಿಶ್ವಕಪ್ ಎಂಬ ನಂಬಿಕೆಯೂ ನಿಜವಾಯಿತು.
ಶಫಾಲಿ ವರ್ಮ ಮತ್ತು ದೀಪ್ತಿ ಶರ್ಮ ಅವರ ಆಲ್ರೌಂಡ್ ಪ್ರದರ್ಶನ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿತು. ಇಬ್ಬರೂ ಅರ್ಧ ಶತಕ ಬಾರಿಸಿದರು. ಬಳಿಕ ದೀಪ್ತಿ 5 ವಿಕೆಟ್, ಶಫಾಲಿ 2 ವಿಕೆಟ್ ಉಡಾಯಿಸಿದರು. ಭಾರೀ ಮಳೆಯಿಂದ 2 ಗಂಟೆ ವಿಳಂಬವಾಗಿ ಆರಂಭಗೊಂಡ ಪಂದ್ಯದಲ್ಲಿ ಭಾರತ 7 ವಿಕೆಟಿಗೆ 298 ರನ್ ಪೇರಿಸಿದರೆ, ದಕ್ಷಿಣ ಆಫ್ರಿಕಾ
45.3 ಓವರ್ ಗಳಲ್ಲಿ 246ಕ್ಕೆ ಆಲೌಟ್ ಆಯಿತು.
ಒಂದೆಡೆ ವಿಕೆಟ್ ಉರುಳುತ್ತ  ಹೋದರೂ ಇನ್ನೊಂದು ಕಡೆ ಕ್ರೀಸ್ ಆಕ್ರಮಿಸಿಕೊಂಡು ನಿಂತ ನಾಯಕಿ ಲಾರಾ ವೋಲ್ವಾರ್ಟ್ ಶತಕ ಬಾರಿಸುವ ಮೂಲಕ ಭಾರತಕ್ಕೆ ಭೀತಿಯೊಡ್ಡುತ್ತಲೇ ಹೋದರು. 42ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಅವರು 98 ಎಸೆತಗಳಿಂದ  101 ರನ್ ಹೊಡೆದರು (11 ಬೌಂಡರಿ, 1 ಸಿಕ್ಸ್). ಅಮನ್ಜೋತ್ ಚೆಂಡನ್ನು ಹಾರಿಸಿ ಹಾರಿಸಿ 3ನೇ ಪ್ರಯತ್ನದಲ್ಲಿ ಕ್ಯಾಚ್ ಪಡೆಯುವ ಮೂಲಕ ಭಾರತವನ್ನು ಗೆಲುವಿನ ದಡಕ್ಕೆ ತಂದರು.

