ಉಡುಪಿ: ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾದರಿ ನಮೂನೆ ಅರ್ಜಿಯಲ್ಲಿ ಧರ್ಮ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಮರಾಠ, ಉಪಜಾತಿ ಕಾಲಂನಲ್ಲಿ ಕುಣಬಿ, ಮಾತೃಭಾಷೆ ಮರಾಠಿ ಎಂಬುದಾಗಿ ಸ್ಪಷ್ಟವಾಗಿ ದಾಖಲಿಸಬೇಕು ಎಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ವಿನಂತಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪರಿಷತ್ ಗೌರವಾಧ್ಯಕ್ಷ ಕೇಶವ ರಾವ್ ಮಾನೆ, ಕ್ಷತ್ರಿಯ ಮರಾಠ ಸಮುದಾಯದಲ್ಲಿ 96 ಉಪನಾಮಗಳಿದ್ದು, ಬೇರೆ ಬೇರೆ ರೀತಿ ದಾಖಲಿಸಿದರೆ ಭವಿಷ್ಯದಲ್ಲಿ ಯುವ ಜನಾಂಗಕ್ಕೆ ಸಮಸ್ಯೆಯಾಗಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಮಾಜಿ ಸಚಿವ ಪಿ ಜಿ ಆರ್ ಸಿಂಧ್ಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಏಕರೂಪದಲ್ಲಿ ಕಾಲಂ ಭರ್ತಿ ಮಾಡಲು ತೀರ್ಮಾನಿಸಲಾಗಿದೆ ಎಂದರು.
ರಾಜ್ಯದಲ್ಲಿ ನಮ್ಮ ಸಮಾಜ 40 ರಿಂದ 50 ಲಕ್ಷ ಜನಸಂಖ್ಯೆ ಹೊಂದಿದ್ದು, ಬೀದರ್, ಬಿಜಾಪುರ, ದಾವಣಗೆರೆ, ಧಾರವಾಡ ಮೊದಲಾದ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯಲ್ಲಿ 350 ಮನೆಗಳಿದ್ದು, ಸಿದ್ದಾಪುರ, ಕಾರ್ಕಳ, ಬಡನಿಡಿಯೂರು, ಉಡುಪಿ ಭಾಗದಲ್ಲಿ ವಾಸಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್ ಕವಡೆ, ಕಾರ್ಯದರ್ಶಿ ಸಂತೋಷ್ ರಾವ್ ಕವಡೆ, ಸತೀಶ್ ರಾವ್, ವಿಘ್ನೇಶ್ ರಾವ್, ಮಧ್ವೇಶ್ ಕೆ. ಮೊದಲಾದವರು ಉಪಸ್ಥಿತರಿದ್ದರು.