ಶಿವಮೊಗ್ಗ: ಶಿವಮೊಗ್ಗದ ಬಂಗಾರಪ್ಪ ಬಡಾವಣೆಯಲ್ಲಿ ಗಣೇಶನ ಮೂರ್ತಿಗೆ ಕಾಲಿನಿಂದ ಒದ್ದು ಹಾಗೂ ಅಲ್ಲೇ ಇದ್ದ ನಾಗನ ವಿಗ್ರಹ ಚರಂಡಿಗೆ ಎಸೆದು ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರೆಹಮತ್‌ವುಲ್ಲಾ ಹಾಗೂ ಸದ್ದಾಂನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ಮುನ್ನೆಚ್ಚರಿಕೆಯಿಂದ ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಿಡಿಗೇಡಿಗಳು ಮಾಡಿದ ಉದ್ಧಟತನದಿಂದಾಗಿ ಕೆಲಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ, ಸಕಾಲಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದಾರೆ.
ಬಂಗಾರಪ್ಪ ಬಡಾವಣೆಯ ಮುಖ್ಯ ರಸ್ತೆಯ ಬಳಿಯ ಪಾರ್ಕ್ ನಲ್ಲಿ ಗಣೇಶನ ಮೂರ್ತಿ ಹಾಗೂ ನಾಗನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಆದರೆ ನಿನ್ನೆ (ಜುಲೈ 05) ಸಂಜೆ ಇಬ್ಬರು ಅನ್ಯಕೋಮಿ ಯುವಕರು ಗಣೇಶನ ಮೂರ್ತಿಗೆ ಕಾಲಿನಿಂದ ಒದ್ದು ಹಾಗೂ ಅಲ್ಲೇ ಇದ್ದ ನಾಗನ ವಿಗ್ರಹ ಚರಂಡಿಗೆ ಎಸೆದು ಪರಾರಿಯಾಗಿದ್ದರು. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ಅದರಂತೆ ಇದೀಗ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಘಟನೆ ಸಂಬಂಧ ಏರಿಯಾದ ಜನ ಆಕ್ರೋಶ ಹೊರ ಹಾಕಿದ್ದರು. ಪಕ್ಕದಲ್ಲೇ ನಿರ್ಮಾಣ ಹಂತದ ಕಟ್ಟಡಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ವಿಗ್ರಹಗಳಿಗೆ ಅಪಮಾನ ಮಾಡಿದ್ದಾನಂತೆ. ಆಗ ಸ್ಥಳೀಯರ ಜತೆ ಮಾತಿನ ಚಕಮಕಿ ಮಾಡಿರೋದು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗ್ತಿದ್ದಂತೆಯೇ ಸ್ಥಳಕ್ಕೆ ಎಸ್‌ಪಿ ಮಿಥುನ್‌ಕುಮಾರ್ ಧಾವಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದರು.