ಆತ್ಮವಿಶ್ವಾಸವಿದ್ದಲ್ಲಿ ಪರೀಕ್ಷೆ ಎದುರಿಸುವುದು ಸುಲಭ – ಡಾ. ನಾಗರಾಜ್ ವಿ.ಬೈರಿ

0
11

ದಾವಣಗೆರೆ : ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಇಂತಹ ಪರೀಕ್ಷಾ ಪೂರ್ವಭಾವಿ ತಯಾರಿ ಉಚಿತ ಕಾರ್ಯಾಗಾರಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕಾಗಿದೆ. ಮಕ್ಕಳು ಆತ್ಮವಿಶ್ವಾಸದೊಂದಿಗೆ ಯಾವುದೇ ಆತಂಕವಿಲ್ಲದೇ ಪರೀಕ್ಷೆ ಬರೆದರೆ ಉತ್ತಮ ಫಲಿತಾಂಶದೊಂದಿಗೆ ವ್ಯಾಸಂಗ ಮಾಡಿದ ವಿದ್ಯಾಸಂಸ್ಥೆಗೆ, ಹೆತ್ತ ತಂದೆ-ತಾಯಿಗಳಿಗೆ, ಅಕ್ಷರಾಭ್ಯಾಸ ಮಾಡಿದ ಗುರುಗಳಿಗೆ, ಹುಟ್ಟಿದ ಮೈಸೂರಿಗೆ ಒಳ್ಳೆಯ ಹೆಸರು ತರಬೇಕು ಎಂದು ಕಲಾಕುಂಚ ಮೈಸೂರು ಶಾಖೆಯ ನೂತನ ಅಧ್ಯಕ್ಷರಾದ ಡಾ. ನಾಗರಾಜ್ ವಿ. ಬೈರಿಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮೈಸೂರು ಶಾಖೆ ಉದ್ಘಾಟನೆ ಜೊತೆಗೆ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪೂರ್ವಬಾವಿ ತಯಾರಿ ಸಿದ್ಧತಾ ಉಚಿತ ಕಾರ್ಯಾಗಾರದ ಉದ್ಘಾಟನೆ ಮಾಡಿದ ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಡಿಕೆರೆ ಗೋಪಾಲರವರು ಮಾತನಾಡಿ, ವಿದ್ಯಾರ್ಥಿಗಳಿಗೆ ಏಕಾಗ್ರತೆಯಿಂದ, ಸಮಯ ಪ್ರಜ್ಞೆಯೊಂದಿಗೆ ಕರ್ತವ್ಯನಿಷ್ಠೆಯೊಂದಿಗೆ, ಪೂರ್ವ ಸಿದ್ಧತೆಯೊಂದಿಗೆ ತೊಡಗಿಸಿಕೊಂಡರೆ ಪರೀಕ್ಷೆ ಫಲಿತಾಂಶ ಉತ್ತಮ ಆಗುತ್ತದೆ ಎಂದರು.

ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಪರೀಕ್ಷೆಯ ಪೂರ್ವಬಾವಿ ತಯಾರಿ ಸಿದ್ಧತಾ ಉಚಿತ ಕಾರ್ಯಾಗಾರ ನಡೆಸಿಕೊಟ್ಟು ಶಿಕ್ಷಕರ, ಶಿಕ್ಷಕಿಯರ ಅನುಮತಿ ಪಡೆದು ಪ್ರತೀಜ್ಞಾವಿಧಿ ಮಕ್ಕಳಿಗೆ ಬೋಧನೆ ಮಾಡಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಮೈಸೂರು ಶಿಕ್ಷಣ ಕ್ಷೇತ್ರದ ಶಿಕ್ಷಣಾಧಿಕಾರಿಗಳಾದ ಪ್ರಕಾಶ್ ಎಂ., ಮೈಸೂರಿನ ಹಿರಿಯ ಪತ್ರಕರ್ತ ಆಂಶಿ ಪ್ರಸನ್ನಕುಮಾರ್ ರಾಷ್ಟ್ರ ಪ್ರಶಸ್ತಿಗೆ ಭಾಜನರಾದ ಹಿರಿಯ ಶಿಕ್ಷಕ ಮೈಸೂರು ಶಾಖೆಯ ಉಪಾಧ್ಯಕ್ಷರಾದ ಗಂಗಾಧರಪ್ಪ ಮಾತನಾಡಿ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕಲೆ, ಸಾಹಿತ್ಯ, ಶಿಕ್ಷಣ, ಯಕ್ಷಗಾನ,ಸಂಸ್ಕೃತಿ, ಸಂಸ್ಕಾರದೊಂದಿಗೆ ಕಳೆದ 35 ವರ್ಷಗಳಿಂದ ನಿರಂತರ ಕಠಿಣ ಪರಿಶ್ರಮದಿಂದ ನಡೆದ ಈ ಸಂಸ್ಥೆ ಶ್ಲಾಘನೀಯ ಎಂದರು.

ದಾವಣಗೆರೆಯ ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಸಮಿತಿ ಸದಸ್ಯರಾದ ಶಿಲ್ಪಾ ಉಮೇಶ್, ಕಲಾಕುಂಚ ಮೈಸೂರು ಶಾಖೆಯ ಸಮಿತಿ ಸದಸ್ಯರಾದ ವಂದನಾ ಶ್ರೀಧರ್ ನಾಯಕ್ ಉಪಸ್ಥಿತರಿದ್ದರು.

ಕಲಾಕುಂಚ ಮೈಸೂರು ಶಾಖೆಯ ಉದ್ಘಾಟನೆಯ ಸಮಾರಂಭ ಇತ್ತೀಚಿಗೆ ಮೈಸೂರಿನ ಹೊಟಗಳ್ಳಿ ಸರ್ಕಾರಿ ಪ್ರೌಢಶಾಲೆಯ ಶ್ರೀ ಶಾರದಾ ಸಭಾಂಗಣದಲ್ಲಿ ಶಾಲಾ ವಿದ್ಯಾರ್ಥಿನಿಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಕಲಾಕುಂಚ ಮೈಸೂರು ಶಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಸಂಗೀತಾ ಪ್ರಸನ್ನ ನಾಡಿಗೇರ್ ಸ್ವಾಗತಿಸಿದರು. ಈ ವಿದ್ಯಾಸಂಸ್ಥೆಯ ಶಿಕ್ಷಕರಾದ ರಂಗಸ್ವಾಮಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

ಮೈಸೂರಿನ ವಿವಿಧ ಪ್ರೌಢಶಾಲೆಗಳಿಗೆ ಹೋಗಿ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆ ಎದುರಿಸುವ ಧೈರ್ಯ ತುಂಬುವ ಕಾರ್ಯಾಗಾರ ಸುಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here