ಮೀರಾ-ಭಾಯಂದರ್ ತುಳುವ ಮಹಾಸಭೆಯ ಸಂಚಾಲಕರಾಗಿ ಜಯಪ್ರಕಾಶ್ ಪೂಜಾರಿ ನೇಮಕ

0
45

ಮುಂಬೈ: ತುಳುವರ ಸಾಂಸ್ಕೃತಿಕ ಹಕ್ಕು, ಪರಂಪರೆ ಹಾಗೂ ಭಾಷಾ ಸಂರಕ್ಷಣೆಯ ಹೋರಾಟವನ್ನು ಮುನ್ನಡೆಸುತ್ತಿರುವ ತುಳುವ ಮಹಾಸಭೆ ಮೀರಾ–ಭಾಯಂದರ್ ಘಟಕದ ಸಂಚಾಲಕರಾಗಿ ಪ್ರಸಿದ್ಧ ಉದ್ಯಮಿ ಹಾಗೂ ಸಮಾಜಸೇವಕ ಜಯಪ್ರಕಾಶ್ ಪೂಜಾರಿ ಅವರನ್ನು ನೇಮಿಸಲಾಗಿದೆ. ಈ ನೇಮಕವನ್ನು ಮಹಾಸಭೆಯ ಮುಂಬೈ ಮಹಾನಗರ ಸಂಚಾಲಕರಾದ ಅಡ್ವೊಕೇಟ್ ರತ್ನಾಕರ ಶೆಟ್ಟಿ ಮೊರ್ಲ ಪ್ರಕಟಿಸಿದ್ದಾರೆ.

ಜಯಪ್ರಕಾಶ್ ಪೂಜಾರಿ ಅವರು ಕಳೆದ ಹಲವು ದಶಕಗಳಿಂದ ಸಮಾಜಮುಖಿ ಸೇವೆ, ಶಿಕ್ಷಣೋತ್ಸಾಹ ಹಾಗೂ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತುಳುನಾಡು ಸೇವಾ ಸಮಾಜ ಮೀರಾ–ಭಾಯಂದರ್ ನಲ್ಲಿ ಸಂಚಾಲಕರಾದ ಇವರು ಶಿಕ್ಷಣ ಸಮಿತಿ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಿಲ್ಲವಾರ್ ಅಸೋಸಿಯೇಷನ್ ಭಾಯಂದರ್ ವಲಯದ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ಪ್ರಮುಖ ಕೊಡುಗೆ ನೀಡಿದ್ದಾರೆ. ಬಿಲ್ಲವ ಅಸೋಸಿಯೇಷನ್ ಮುಂಬೈಯ ಶಿಕ್ಷಣ ಸಮಿತಿಯಲ್ಲೂ ಸಕ್ರಿಯರಾಗಿದ್ದರು. ರಾಜಕೀಯ ಕ್ಷೇತ್ರದಲ್ಲಿಯೂ ಅವರು ಸಕ್ರಿಯರಾಗಿದ್ದು, ಮೀರಾ-ಭಾಯಂದರ್ ಕಾಂಗ್ರೆಸ್ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾಗಿ, ಸೌತ್ ಇಂಡಿಯನ್ ಸೆಲ್ ಕಾಂಗ್ರೆಸ್ ಸಮಿತಿಯ ಜಿಲ್ಲಾ ಕಾರ್ಯದರ್ಶಿಯಾಗಿ (2013ರಿಂದ) ಕಾರ್ಯನಿರ್ವಹಿಸಿದ್ದಾರೆ.

ವ್ಯವಹಾರಿಕ ಕ್ಷೇತ್ರದಲ್ಲಿ 22 ವರ್ಷಗಳ ಅನುಭವ ಹೊಂದಿರುವ ಪೂಜಾರಿ, ಪ್ರವಾಸೋದ್ಯಮ ಮತ್ತು ಹೋಟೆಲ್ ಕ್ಷೇತ್ರದಲ್ಲಿ ಯಶಸ್ವಿ ಉದ್ಯಮಿಯಾಗಿ ತಮ್ಮ ಗುರುತನ್ನು ನಿರ್ಮಿಸಿಕೊಂಡಿದ್ದಾರೆ.

ಮೀರಾ-ಭಾಯಂದರ್ ಘಟಕದ ಸಂಚಾಲಕರಾಗಿ ನೇಮಕಗೊಂಡಿರುವ ಜಯಪ್ರಕಾಶ್ ಪೂಜಾರಿ ಅವರ ನಾಯಕತ್ವದಲ್ಲಿ ತುಳು ಭಾಷಾ ಬೋಧನೆ, ಸಾಂಸ್ಕೃತಿಕ ಚಟುವಟಿಕೆಗಳ ವಿಸ್ತರಣೆ, ಹಾಗೂ ಸಮುದಾಯದ ಆರ್ಥಿಕ–ಸಾಮಾಜಿಕ ಬಲವರ್ಧನೆಗೆ ಶಕ್ತಿಯುತ ಕಾರ್ಯಕ್ರಮಗಳು ಜಾರಿಯಾಗಲಿವೆ ಎಂದು ಮಹಾಸಭೆಯ ಕೇಂದ್ರ ಸಮಿತಿ ವಿಶ್ವಾಸ ವ್ಯಕ್ತಪಡಿಸಿದೆ.

ಅವರ ನೇಮಕಕ್ಕೆ ತುಳುವರ್ಲ್ಡ್ ಫೌಂಡೇಶನ್ ನ ಗೌರವ ಅಧ್ಯಕ್ಷರಾದ ಶ್ರೀಹರಿ ನಾರಾಯಣದಾಸ ಅಸ್ರಣ್ಣ ಕಟೀಲ್ ಮತ್ತು ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅಬುಧಬಿ ಹಾಗೂ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ತುಳುವ ನಾಯಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here