ಮೃದು ಸ್ವಭಾವದ, ಜನಮೆಚ್ಚಿದ ನಿವೃತ ಶಿಕ್ಷಕ ಜೋಕೀ ಮೊಂತೆರೋ

0
156

ಮೀಯಪದವಿನ ಪರಿಸರದಲ್ಲಿ ಜೋಕಿ ಮಾಸ್ಟರ್ ಎಂದೇ ಜನಮಾನಸದಲ್ಲಿ ಪ್ರೀತಿಯಿಂದ ಸ್ಥಾನ ಪಡೆದ ಶ್ರೀ ಜೋಕೀ ಮೊಂತೆರೋ ಅವರು ವಿದ್ಯಾವರ್ಧಕ ಎಯುಪಿ ಶಾಲಾ ನಿವೃತ ಶಿಕ್ಷಕ ಜೋಕೀ ಮೊಂತೆರೋ ಅವರು 25-4-1954 ರಂದು ಕಾಸರಗೋಡು ಜಿಲ್ಲೆಯ ಮೀಂಜ ಗ್ರಾಮದ ಅಮ್ಮೆನಡ್ಕದ ಕೃಷಿಕ ಕುಟುಂಬದಲ್ಲಿ, ದಿವಂಗತ ಗೇಬ್ರಿಯಲ್ ಮೊಂತೆರೋ ಹಾಗೂ ದಿವಂಗತ ಜೆಲ್‌ಫಿನ್ ಡಿ ಸೋಜಾ ದಂಪತಿಗಳ ಪುತ್ರನಾಗಿ ಜನಿಸಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶ್ರೀ ವಾಣಿವಿಲಾಸ ಶಾಲೆಯಲ್ಲೂ,ಪ್ರೌಢಪ್ರಾಥಮಿಕ ಶಿಕ್ಷಣವನ್ನು ವಿದ್ಯಾವರ್ಧಕ ಎಯುಪಿ ಶಾಲೆ ಮೀಯಪದವಿನಲ್ಲೂ,ಹೈಸ್ಕೂಲ್ ಶಿಕ್ಣಣವನ್ನು ಶ್ರೀ ವಿದ್ಯಾವರ್ಧಕ ಹೈಸ್ಕೂಲಿನಲ್ಲೂ ಪೂರೈಸಿದರು.ತದನಂತರ ಮಡಿಕೇರಿಯ ಸರಸ್ವತಿ ಟೀಚರ್ ಟ್ರೈನಿಂಗ್ ಕಾಲೇನಿನಲ್ಲಿ ಟಿ.ಟಿ.ಸಿಯನ್ನು ಪಡೆದು 1978ರಲ್ಲಿ ವಿದ್ಯಾವರ್ಧಕ ಎಯುಪಿ ಶಾಲೆಯಲ್ಲಿ ಅಧ್ಯಾಪನ ವೃತ್ತಿಯನ್ನು ಆರಂಭಿಸಿ,2010ರಲ್ಲಿ ಸೇವೆಯಿಂದ ನಿವೃತ್ತಿ ಪಡೆದರು.

ಒಂದನೇ ತರಗತಿಯ ಪುಟಾಣಿ ಮಕ್ಕಳಿಗೆ ಅಕ್ಷರ ಲೋಕವನ್ನು ಪರಿಚಯಿಸಿ, ಅವರ ಬಾಳಿಗೆ ಭದ್ರ ಬುನಾದಿ ಹಾಕಿದ ಶ್ರೀ ಜೋಕೀ ಮೊಂತೇರೋ ಅವರ ಶೈಲಿ ಅಪೂರ್ವವಾದುದು. ಶಾಲೆಯ ಹೊಸ್ತಿಲು ತುಳಿದ ಅದೆಷ್ಟೋ ಮುಗ್ಧ ಮನಸ್ಸುಗಳಿಗೆ ಪ್ರೀತಿಯಿಂದ ವಿದ್ಯಾಭ್ಯಾಸ ನೀಡಿದ ಅವರನ್ನು ಇಂದಿಗೂ ಅವರ ವಿದ್ಯಾರ್ಥಿಗಳು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಶಿಕ್ಷಕ ವೃಂದದೊಂದಿಗೆ ಅವರು ಹೊಂದಿದ್ದ ಆಪ್ತತೆ ಮತ್ತು ವಿದ್ಯಾರ್ಥಿಗಳ ಮನ ಗೆದ್ದ ಅವರ ಸೌಮ್ಯ ಸ್ವಭಾವವು ಎಲ್ಲರಿಗೂ ಮಾದರಿಯಾಗಿತ್ತು. ಆದರ್ಶ, ಶಿಸ್ತುಬದ್ಧತೆ ಹಾಗೂ ಸೌಮ್ಯ ಸ್ವಭಾವದ ಶಿಕ್ಷಕರಾಗಿ ಅವರು ನಾಡಿನುದ್ದಕ್ಕೂ ವ್ಯಾಪಕವಾಗಿ ಗುರುತಿಸಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅವರ ನಿಷ್ಠಾವಂತ ಸೇವೆ ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ವಿದ್ಯಾವರ್ಧಕ ಎಯುಪಿ ಶಾಲೆಯ ಶೈಕ್ಷಣಿಕ ಪ್ರಗತಿಗೆ ಅಮೂಲ್ಯ ಕೊಡುಗೆಯಾಗಿದೆ.

ಪ್ರಸ್ತುತ ಅಮ್ಮೆನಡ್ಕದಲ್ಲಿ ಪತ್ನಿ ಲೈಡಿಯಾ ಡಿ ಸೋಜಾ ಅವರೊಂದಿಗೆ ವಾಸವಾಗಿರುವ ಜೋಕೀ ಮೊಂತೆರೋ ಅವರಿಗೆ ಜೋಸ್ಟಲ್ ಮೊಂತೆರೋ ಮತ್ತು ಜೆನೆಲ್ ಮೊಂತೆರೋ ಎಂಬಿಬ್ಬರು ಮಕ್ಕಳಿದ್ದು ಇಬ್ಬರೂ ವಿವಾಹಿತರಾಗಿದ್ದಾರೆ. ಕೃಷಿಕ ಕುಟುಂಬದ ಹಿನ್ನೆಲೆಯಿರುವ ಶ್ರೀಯುತರು ಶ್ರಮಜೀವಿಯಾಗಿದ್ದು ಕೃಷಿಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡು ಒಬ್ಬ ಆದರ್ಶ ಕೃಷಿಕರೆನಿಸಿಕೊಂಡಿದ್ದಾರೆ.ಅಮ್ಮೆನಡ್ಕ ಪರಿಸರದಲ್ಲಿ ಇವರ ಕೃಷಿಯೂ ಎಲ್ಲರಿಗೂ ಮಾದರಿಯಾಗಿದೆ.

ವಿದ್ಯಾವರ್ಧಕ ಎಯುಪಿ ಶಾಲೆ ಮೀಯಪದವಿನ ವಾರ್ಷಿಕೋತ್ಸವವು ಫೆಬ್ರವರಿ 13ರಂದು ಶಾಲಾ ಆವರಣದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಶಾಲೆಯಲ್ಲಿ 1978ರಿಂದ 2010ರವರೆಗೆ ಸುದೀರ್ಘ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ರೀ ಜೋಕೀ ಮೊಂತೆರೋ ಅವರನ್ನು ಶಾಲಾ ಆಡಳಿತ ವರ್ಗ, ಶಿಕ್ಷಕ ವೃಂದ ,ವಿದ್ಯಾರ್ಥಿಗಳು ಮತ್ತು ರಕ್ಷಕ ಶಿಕ್ಷಕ ಸಂಘದವರೆಲ್ಲರೂ ಸೇರಿ ಗಣ್ಯರ ಸಮಕ್ಷಮ ಗೌರವಿಸಿ ಸನ್ಮಾನಿಸಲಿದ್ದಾರೆ.

ಎಪ್ಪತ್ತೆರಡರ ವಯಸ್ಸಿನಲ್ಲಿರುವ ಜೋಕೀ ಮೊಂತೆರೋ ಅವರಿಗೆ ಇನ್ನಷ್ಟು ಆಯುರಾರೋಗ್ಯ ಸುಖ ಸಂಪತ್ತನ್ನು ಆ ಭಗವಂತ ಕರುಣಿಸಲಿ ಎನ್ನುವುದೇ ಹಾರೈಕೆಯಾಗಿದೆ..

LEAVE A REPLY

Please enter your comment!
Please enter your name here