ಜು.26: ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಶತಮಾನೋತ್ಸವ ಕಟ್ಟಡದ ಉದ್ಘಾಟನೆ

0
31

 ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ (ಐಆರ್‌ಸಿಎಸ್) ದ.ಕ.ಜಿಲ್ಲಾ  ಸಮಿತಿ ವತಿಯಿಂದ ಮಂಗಳೂರು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುಮಾರು 6 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಶತಮಾನೋತ್ಸವ ಕಟ್ಟಡ ‘ದ ಉದ್ಘಾಟನಾ ಸಮಾರಂಭ ಜು.26ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ.
ಕರ್ನಾಟಕದ ರಾಜ್ಯಪಾಲ ಹಾಗೂ ಐಆರ್‌ಸಿಎಸ್ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ. ಐಆರ್‌ಸಿಎಸ್ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್.ಡಿ., ನಿಟ್ಟೆ ಪರಿಗಣಿತ ವಿ.ವಿ.ಯ ಕುಲಾಧಿಪತಿ ಎನ್.ವಿನಯ ಹೆಗ್ಡೆ, ಐಆರ್‌ಸಿಎಸ್ ರಾಜ್ಯ ಘಟಕದ ಚೇರ್ಮನ್ ಬಸ್ರೂರು ರಾಜೀವ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ ರಾವ್ ಐಪಿಎಸ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸುಮಾರು 20 ಸಾವಿರ ಚದರ ಅಡಿಯ ಭವ್ಯ ಶತಮಾನೋತ್ಸವ ಕಟ್ಟಡ ತಳ ಅಂತಸ್ತು, ನೆಲ ಅಂತಸ್ತು ಸಹಿತ ಒಟ್ಟು 4 ಅಂತಸ್ತು ಹೊಂದಿದೆ. ನೆಲ ಅಂತಸ್ತಿನಲ್ಲಿ  ಕಚೇರಿ, ಸಂದರ್ಶಕರ ಕೊಠಡಿ, ಮೀಟಿಂಗ್ ಹಾಲ್, 1ನೇ ಅಂತಸ್ತಿನಲ್ಲಿ 300 ಆಸನಗಳ ‘ಪ್ರೇರಣಾ‘ ಹವಾ ನಿಯಂತ್ರಿತ ಸಭಾಂಗಣ, 2ನೇ ಅಂತಸ್ತಿನಲ್ಲಿ ಸುಮಾರು 500 ಮಂದಿ ಸಾಮರ್ಥ್ಯದ ‘ಸೀ ವ್ಯೆ’ಸಭಾಂಗಣವಿದೆ. ಸಾರ್ವಜನಿಕ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು ಮತ್ತು ದಾನಿಗಳ ನೆರವಿನಿಂದ ನೂತನ ಕಟ್ಟಡ ನಿರ್ಮಾಣಗೊಂಡಿದೆ. ದಶಕಗಳ ಹಿಂದೆ ರೆಡ್‌ಕ್ರಾಸ್  ಸಂಸ್ಥೆ ಜಿಲ್ಲಾಧಿಕಾರಿ ಕಛೇರಿಯ ಒಂದು ಸಣ್ಣ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು.

LEAVE A REPLY

Please enter your comment!
Please enter your name here