ಮೂಡಬಿದಿರೆ: ಕಡಂದಲೆ ಗ್ರಾಮದ ವಿದ್ಯಾಗಿರಿ “ಮಾದರಿ ಅಂಗನವಾಡಿ” ಕೇಂದ್ರದಲ್ಲಿ ಪುಟ್ಟ ಮಕ್ಕಳಿಗೆ ಸಮವಸ್ತ್ರ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಕೇಂದ್ರದ ಅಭಿಮಾನಿ ಧರ್ಮಗುರು ಫಾ. ಮೆಕ್ಸಿಮ್ ಪಿಂಟೊರವರು ಎಲ್ಲಾ ಮಕ್ಕಳಿಗೆ ಸಮವಸ್ತ್ರಗಳನ್ನು ದಾನ ರೂಪದಲ್ಲಿ ವಿತರಿಸಿದರು. ಕಡಂದಲೆ ವಿದ್ಯಾಗಿರಿ ಸರಕಾರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ತುಳುನಾಡು ವಾರ್ತೆಯ ಪತ್ರಕರ್ತರಾದ ಜಗದೀಶ್ ಪೂಜಾರಿಯವರು ಪುಸ್ತಕಗಳನ್ನು ದಾನ ರೂಪದಲ್ಲಿ ವಿತರಿಸಿದರು.
ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆ ಬೆನೆಡಿಕ್ಟಾ ದಾoತಿಸ್ ಸ್ವಾಗತಿಸಿದರು. ಫಾ. ಮ್ಯಾಕ್ಸಿಮ್ ರವರ ಸವಿ ನುಡಿಗಳು ಮತ್ತು ಮುಖ್ಯ ಶಿಕ್ಷಕಿ ಪ್ರತಿಭಾರವರ ಹಿತ ನುಡಿಗಳು ಮಕ್ಕಳನ್ನು ಆನಂದಿಸಿದವು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಜ್ಯೋತಿ ಸೀತಾರಾಮ್, ಶಾಲಾ ಮುಖ್ಯ ಶಿಕ್ಷಕಿ ಪ್ರತಿಭಾ, ಸಹ ಶಿಕ್ಷಕಿ ಪೌಲಿನ್ ಪಿಂಟೊ, ಅಂಗನವಾಡಿ ಸಹಾಯಕಿ ಮೋಹಿನಿ, ಆಶಾ ಕಾರ್ಯಕರ್ತೆ ಪವಿತ್ರ ಲಕ್ಷ್ಮಣ್ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಜಗದೀಶ್ ಪೂಜಾರಿಯವರು ಸರ್ವರಿಗೂ ಧನ್ಯವಾದ ಸಮರ್ಪಿಸಿದರು.