ದಾವಣಗೆರೆ : ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆಯ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯಿಂದ ಇತ್ತೀಚಿಗೆ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಐಲ ಉಪ್ಪಳಬಿಂಬ ಪ್ರತಿಷ್ಠಾ ದಿನದ ಪ್ರಯುಕ್ತ ಚತುರ್ವೀಣಾ ವಾದನ ಸುಸಂಪನ್ನಗೊಂಡಿತು ಎಂದು ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಪ್ರಥಮ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತ್ ತಿಳಿಸಿದ್ದಾರೆ.
ನಾಲ್ಕು ವೀಣೆಗಳನ್ನು ಅತ್ಯುದ್ಭುತವಾಗಿ ವೀಣಾವಾದನ ಮಾಡಿದವರು ವಿದುಷಿ ಮೀನಾಕ್ಷಿ ಶಾಂತರಾಮ್‌ರಾವ್, ವೀಣಾ ರವೀಶ್‌ರಾವ್, ಕುಮಾರಿ ಸುಪ್ರಜಾ ರಾವ್, ಇವರೆಲ್ಲರೂ ಸಂಪ್ರಾದಾಯಿಕವಾಗಿ ವೀಣಾ ವಾದನಗಳನ್ನು ನಡೆಸಿದ ಸಮಾರಂಭದಲ್ಲಿ ನೆರೆದ ಪ್ರೇಕ್ಷಕರು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸ ಮನೆಯ ವಿದ್ವಾನ್ ಬಾಲಕೃಷ್ಣ ಮೃದಂಗವನ್ನು ಅಚ್ಚುಕಟ್ಟಾಗಿ ಬಾರಿಸಿದರು.
ವಿದುಷಿ ದಿವ್ಯಾ ಚಂದನ್ ಕಾರಂತ್‌ರವರು ಪ್ರಾರ್ಥನೆಯೊಂದಿಗೆ ಸ್ವಾಗತ ಮಾಡಿ ಅಚ್ಚುಕಟ್ಟಾಗಿ ನಡೆಸಿ ಕೊನೆಯಲ್ಲಿ ವಂದಿಸಿದರು. ಕೇರಳದ ಗಡಿನಾಡಿನ ಶಾಖೆಯಿಂದ ನಿರಂತರವಾಗಿ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಸೇರಿದಂತೆ ಕಠಿಣ ಪರಿಶ್ರಮದಿಂದ ನಡೆಯುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಯವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

