ಕಂಬಳ ಜನರನ್ನು ಒಂದುಗೂಡಿಸುವ ಆಚರಣೆ: ಗುಣಪಾಲ ಕಡಂಬ

0
22

ಕಾಳು ಪಾಣಾರ ಅವರಿಗೆ ತುಳು ಅಕಾಡೆಮಿಯ ಚಾವಡಿ ತಮ್ಮನ

ಕಾರ್ಕಳ: ತುಳುನಾಡಿನ ಕಂಬಳವು ಒಂದು ಕ್ರೀಡೆ ಮಾತ್ರವಲ್ಲ, ಅದು ಜಾತ್ಯತೀತವಾಗಿ ಮತ್ತು ಮೇಲುಕೀಳು ಎಂಬ ಭಾವನೆಯಿಲ್ಲದೆ, ಸಮಾಜದ ಎಲ್ಲ ಜನರು ಒಂದೆಡೆ ಸೇರುವ ತೌಳವ ಆಚರಣೆಯಾಗಿದೆ. ಕಂಬಳದಲ್ಲಿ ಗೆಲ್ಲುವ-ಸೋಲುವ ಸ್ಪರ್ಧೆ ಇದ್ದರೂ ಅಂತಿಮವಾಗಿ ಇದು ಸಮಾಜದ ಸರ್ವರನ್ನು ಒಂದಾಗಿಸುತ್ತದೆ ಎಂದು ಕಂಬಳದ ವಿದ್ವಾಂಸರಾದ ಗುಣಪಾಲ ಕಡಂಬ ಅವರು ಅಭಿಪ್ರಾಯ ಪಟ್ಟರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ನ ಸೆಂಟರ್‌ ಫಾರ್‌ ಇಂಟರ್‌ಕಲ್ಚರಲ್‌ ಸ್ಟಡೀಸ್‌ ಆ್ಯಂಡ್‌ ಡಯಲಾಗ್‌, ಸೆಂಟರ್‌ ಫಾರ್‌ ಕನ್ನಡ ಆ್ಯಂಡ್‌ ರೀಜನಲ್‌ ಲ್ಯಾಂಗ್ವೇಜಸ್‌ ಮತ್ತು ಲಯನ್ಸ್‌ ಕ್ಲಬ್‌ ಮುಂಡ್ಕೂರು-ಕಡಂದಲೆ ಸಹಭಾಗಿತ್ವದಲ್ಲಿ ಸಚ್ಚೇರಿಪೇಟೆಯ ಲಯನ್ಸ್‌ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಂಬಳ ಕೋಣಗಳ ಯಜಮಾನ ಕಡಂದಲೆ ಕಾಳು ಪಾಣಾರ ಅವರಿಗೆ ‘ಚಾವಡಿ ತಮ್ಮನ’ ದ ಗೌರವಾರ್ಪಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತೀಚೆಗೆ ಅಗಲಿದ ಗೆಲುವಿನ ಕೋಣ ‘ಚೆನ್ನ’ನನ್ನು ಸ್ಮರಿಸಿದ ಅವರು ಚೆನ್ನನನ್ನು ಆರಂಭದ ದಿನಗಳಲ್ಲಿ ಪೋಷಿಸುವಲ್ಲಿ ದೈವಾರಾಧಕರಾದ ಕಾಳು ಪಾಣಾರ ಅವರ ಕಾಳಜಿಯನ್ನು ಉಲ್ಲೇಖಿಸುತ್ತ, ’ಕಂಬಳದಲ್ಲಿ ಪಶುಗಳನ್ನು ಯಾವತ್ತೂ ಹಿಂಸಿಸುಸುವುದಿಲ್ಲ. ಅವರನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ.’ ಎಂದರು.

ಸಂಮಾನಕ್ಕೆ ಉತ್ತರಿಸಿದ ಕಾಳು ಪಾಣಾರ ಅವರು, ದೈವಾರಾಧನೆ ಮತ್ತು ಕಂಬಳ ತುಳುನಾಡಿನ ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ. ಈ ಎರಡೂ ಕಲೆಗಳಲ್ಲಿ ಸಕ್ರಿಯನಾಗಿ ಭಾಗವಹಿಸಿ ಯಶಸ್ಸು ಪಡೆಯಲು ಸರ್ವಸಮಾಜದ ಆಶೀರ್ವಾದವೇ ಕಾರಣ’ ಎಂದು ವಿನಯಪೂರ್ವಕವಾಗಿ ಹೇಳಿದರು.

ಪ್ರಸ್ತಾವನೆಯ ಮಾತುಗಳನ್ನಾಡಿದ ಕರ್ನಾಟಕ ತುಳು ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್‌ ಅವರು, ಅಕಾಡೆಮಿಯ ವಿವಿಧ ಕಾರ್ಯಚಟುವಟಿಕೆಗಳ ವಿವರಣೆಯನ್ನು ನೀಡುತ್ತ, ‘ಜನರು ಅಕಾಡೆಮಿಗೆ ಬರಬೇಕು ಎಂಬುದು ಒಂದು ನಿಲುವಾದರೆ, ಅಕಾಡೆಮಿಯು ಜನರ ಬಳಿಗೆ ಹೋಗಬೇಕು ಎಂಬ ನಿಲುವಿಗೂ ನಾವು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ‘ಚಾವಡಿ ತಮ್ಮ ನ’ ದಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಈ ಮೂಲಕ ಹಳ್ಳಿಗೆ ಹೋಗಿ ಸಮಾಜದಲ್ಲಿ ತೆರೆಯ ಮರೆಯಲ್ಲಿ ತುಳು ಸಂಸ್ಕೃತಿಗಾಗಿ ಶ್ರಮಿಸುವ ಜನರನ್ನು ಗುರುತಿಸಿ ಗೌರವಿಸುತ್ತಿದ್ದೇವೆ’ ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಾಜಿ ಜಿಲ್ಲಾ ಪಂಚಾಯತ್‌ ಮತ್ತು ಕೆಎಂಎಫ್‌ ಅಧ್ಯಕ್ಷ ಕೆ. ಪಿ. ಸುಚರಿತ ಶೆಟ್ಟಿ ಅವರು ಮಾತನಾಡಿ, ಕಾಳು ಪಾಣಾರ ಅವರು ಪಾಲಡ್ಕ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾಗಿ ನಡೆಸಿದ ಜನಸೇವೆಯನ್ನು ಸ್ಮರಿಸಿಕೊಂಡರು. ಮುಂಡ್ಕೂರು ಗ್ರಾಮಪಂಚಾಯತ್‌ನ ಮಾಜಿ ಅಧ್ಯಕ್ಷ ಶ್ರೀಧರ ಸನಿಲ್‌, ಲಯನ್ಸ್‌ ಶಾಲೆಯ ಸಂಚಾಲಕರಾದ ಸತ್ಯಶಂಕರ ಶೆಟ್ಟಿ, ಲಯನ್ಸ್‌ ಅಧ್ಯಕ್ಷ ಯಶವಂತ ಆಚಾರ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಂಬಳ ಕೋಣಗಳ ಪೋಷಕರಾದ ಭಾಸ್ಕರ ಕೊಟ್ಯಾನ್‌ ಕೊಳಕೆ-ಇರ್ವತ್ತೂರು, ಶ್ರೀಕಾಂತ ಭಟ್‌ ನಂದಳಿಕೆ ಅವರು ಸಮಕಾಲೀನ ಕಂಬಳದ ಕುರಿತ ಸಂವಾದದಲ್ಲಿ ಭಾಗವಹಿಸಿದ್ದು, ಮಾಹೆಯ ಸಿಐಎಸ್‌ಡಿಯ ಸಂಯೋಜಕ ಡಾ. ಪ್ರವೀಣ್‌ ಶೆಟ್ಟಿ ಸಂವಾದವನ್ನು ನಡೆಸಿಕೊಟ್ಟರು. ಮಾಹೆಯ ಸಿಕೆಆರ್‌ಎಲ್‌ನ ಸಂಯೋಜಕ ಕಾರ್ಯಕ್ರಮವನ್ನು ಸಂಯೋಜಿಸಿದರು. ಅಕಾಡೆಮಿಯ ಸದಸ್ಯ ಪಾಂಗಾಳ ಬಾಬು ಕೊರಗ ಅವರು ಸ್ವಾಗತಿಸಿದರು. ಪತ್ರಕರ್ತ ಶರತ್‌ ಕಿನ್ನಿಗೋಳಿ ಸಂಮಾನಿತರನ್ನು ಪರಿಚಯಿಸಿ ಅಭಿನಂದನೆಯ ಮಾತುಗಳನ್ನಾಡಿದರು. ಸಿಐಎಸ್‌ಡಿಯ ಸಂಶೋಧನ ಸಹವರ್ತಿ ನಿತೇಶ್‌ ಪಡುಬಿದ್ರಿ ವಂದಿಸಿದರು. ಕಂಬಳದ ಅನುಭವಿಗಳಾದ ವಿಶ್ವನಾಥ ಪ್ರಭು ಅತಿಥಿಗಳನ್ನು ಗೌರವಿಸಿದರು.

LEAVE A REPLY

Please enter your comment!
Please enter your name here