ಮಂಗಳೂರು: ಎಸ್. ಸಿ. ಎಸ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘ “ಸಂಪದ” ಪ್ರಸ್ತುತ ಪಡಿಸಿದ್ದ ಕನ್ನಡ ರಾಜ್ಯೋತ್ಸವ-೨೦೨೫ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ 04.11.2025 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವು ನಾಡ ದೇವಿ ಭುವನೇಶ್ವರಿ ದೇವಿಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಹಾಡಿ ನಾಡಗೀತೆ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದಂತಹ ಮಲ್ಲಿಕಾ ರಾವ್ ಸಹಾಯಕ ಪ್ರಾಧ್ಯಾಪಕಿ ಮುಖ್ಯಸ್ಥರು ಕನ್ನಡ ವಿಭಾಗ ಧವಳಾ ಕಾಲೇಜ್ ಮೂಡಬಿದಿರೆ ಇವರು ದೀಪವನ್ನು ಬೆಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಕಂಪನ್ನು ನೀಡಿ ಕನ್ನಡ ಸಾಹಿತ್ಯದ ಹಿನ್ನಲೆ ಯೊಂದಿಗೆ ಕನ್ನಡ ಭಾಷೆ ಮೂಲೆ ಗುಂಪಾಗದೇ ಅದನ್ನು ನಾವು ನಿರರ್ಗಳವಾಗಿ ಬಳಸಬೇಕು. ಕನ್ನಡ ಕೇವಲ ಪಾಠ-ಪಠ್ಯಗಳಲ್ಲಿ ಸೀಮಿತಗೊಳ್ಳದೆ ದಿನನಿತ್ಯದ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಕನ್ನಡ ಮಾಧ್ಯಮದಲ್ಲಿಯೂ ಓದಿ ಶ್ರೇಷ್ಠ ವ್ಯಕ್ತಿಗಳಾಗಬಹುದು, ದಿನನಿತ್ಯದ ಓದು ನಮ್ಮನ್ನು ಕನ್ನಡದ ಮೇಲಿನ ಅಭಿಮಾನವನ್ನು ಹೆಚ್ಚಿಸುತ್ತದೆ. ಕನ್ನಡ ಭಾಷೆ ಮಾತನಾಡು ವಲ್ಲಿ ಯಾವುದೇ ಕೀಳರಿಮೆ ಇಲ್ಲದೆ ಅಭಿಮಾನ ಇರಬೇಕು ಎಂದು ಕನ್ನಡ ಭಾಷೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್. ಸಿ. ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ, ಶ್ರೀ. ಯು. ಕೆ. ಖಾಲಿದ್ ಅವರು ಕನ್ನಡ ರಾಜ್ಯೋತ್ಸವದ ಕುರಿತು ಕವನ ರಚಿಸಿ ಓದುವುದರ ಮೂಲಕ ಕನ್ನಡದ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು. ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಿ, ಭಾಷೆಗೆ ಗೌರವವನ್ನು ಸಲ್ಲಿಸಬೇಕೆಂದು ಹೇಳಿದರು. ಯಾವುದೇ ಕಚೇರಿಗಳಲ್ಲಿ, ವ್ಯವಹಾರ ಮಾಡುವಾಗ ಕನ್ನಡ ಭಾಷೆಯನ್ನು ಹೆಚ್ಚು ಬಳಕೆ ಮಾಡಬೇಕು ಆಗ ಕನ್ನಡ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ಅಲಂಕರಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹಾರ್ದಿಕ್ ಪಿ. ಚೌಹಾಣ್ ಅವರು ಕನ್ನಡ ರಾಜ್ಯೋತ್ಸವ ಸಂಭ್ರಮ ಕೇವಲ ಒಂದು ದಿನಕ್ಕೆ ಸೀಮಿತಗೊಳ್ಳ ದಿರಲಿ, ಕನ್ನಡ ಭಾಷೆಯ ಮಹತ್ವ , ಸಂಸ್ಕೃತಿಗೆ ಗೌರವ, ಕನ್ನಡವನ್ನು ಎಲ್ಲರೂ ಮಾತನಾಡಿ ಕನ್ನಡ ನಮ್ಮ ಗುರುತು ನಮ್ಮ ಗೌರವ ಪ್ರತಿಯೊಬ್ಬ ಕನ್ನಡಿಗನು ಕನ್ನಡವನ್ನು ಮಾತನಾಡಿ ಬರೆದು ಬದುಕಿನಲ್ಲಿ ಅಳವಡಿಸಿ ಕೊಂಡಾಗಲೇ ನಿಜವಾದ ರಾಜ್ಯೋತ್ಸವ ಅರ್ಥಪೂರ್ಣವಾಗುತ್ತದೆ ಎಂದು ಕನ್ನಡದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕನ್ನಡ ವಿಭಾಗ ಮುಖ್ಯಸ್ಥರಾದ ಸುಚಿತ್ರ ಪಿ. ಶೆಟ್ಟಿ ಅವರು ಪ್ರಾಸ್ತಾವಿಕ ನುಡಿಗಳ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ನಾಡಿನ ಪರಂಪರೆಯನ್ನು ಕಾಪಾಡುವ ಹೊಣೆಗಾರಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ರಾಜ್ಯೋತ್ಸವ ಕೇವಲ ಹಬ್ಬವಲ್ಲ ಇದು ನಾಡು ನಾಡಿನ ಒಗ್ಗಟ್ಟಿನ ಪ್ರತೀಕ. “ಕನ್ನಡಿಗನಾದ ನಾನು ರಾಜ್ಯದಲ್ಲಿ ಕನ್ನಡ ಭಾಷೆಯಲ್ಲಿ ವ್ಯವಹರಿಸುತ್ತೇನೆ. ಕನ್ನಡ ಭಾಷೆ, ನೆಲ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡುವುದರ ಮೂಲಕ ಉಪನ್ಯಾಸಕರು, ವಿದ್ಯಾರ್ಥಿಗಳು ದೃಢ ನಿರ್ಧಾರ ಮಾಡಿದರು.
ಕಾರ್ಯಕ್ರಮದ ಸಂಯೋಜಕರಾದ ಕು. ಸರಸ್ವತಿ ಚಿನ್ನಾಕಟ್ಟಿ ಅವರು ಕನ್ನಡ ನಾಡು-ನುಡಿ, ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ಕವನ ವಾಚನ ಮಾಡಿ, ಕನ್ನಡ ಭಾಷೆಯ ಹಿರಿಮೆ-ಗರಿಮೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು .
ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಕಾರ್ಯದರ್ಶಿ ದ್ವಿತೀಯ ವರ್ಷದ ಬಿ ಎಸ್ಸಿ ವಿದ್ಯಾರ್ಥಿ ನಿಖಿಲ್ ಕೆ. ಜೆ ಉಪಸ್ಥಿತರಿದ್ದರು. ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಮೇಘ ಸ್ವಾಗತಿಸಿದರು. ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿನಿ ಶ್ರಾವ್ಯ ವಂದಿಸಿದರು. ಹಾಗೂ ತೃತೀಯ ವರ್ಷದ ಬಿಸಿಎ ವಿದ್ಯಾರ್ಥಿನಿ ನೀಲಮ್ಮ ಕಾರ್ಯಕ್ರಮ ನಿರೂಪಿಸಿದರು.

