ಬಂಟ್ವಾಳ: ಇಲ್ಲಿನ ಪುರಾಣ ಪ್ರಸಿದ್ಧ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಜು. ೨೪ರಂದು ಆಟಿ ಅಮವಾಸ್ಯೆ ಪ್ರಯುಕ್ತ ತೀರ್ಥಸ್ನಾನ ಮತ್ತು ದೇವರಿಗೆ ವಿಶೇಷ ಉತ್ಸವ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ. ವೀರೇಂದ್ರ ಅಮೀನ್ ತಿಳಿಸಿದ್ದಾರೆ.
ಬೃಹತ್ ಗಾತ್ರದ ಬಂಡೆಗಳಿಂದ ಆವೃತವಾದ ಗಿರಿಧಾಮದಲ್ಲಿ ಆಕರ್ಷಕ ಶಿವಾಲಯ ಮತ್ತು ಪಾರ್ವತಿ ದೇವಾಲಯ ಹಾಗೂ ಕೆಳಭಾಗದಲ್ಲಿ ರಥಬೀದಿ ಬಳಿ ಪಾಂಡವರು ನಿರ್ಮಿಸಿದ್ದಾರೆ ಎಂಬ ಪ್ರತೀತಿ ಹೊಂದಿರುವ ವಿಶಾಲವಾದ ಗದಾ ತೀರ್ಥಕೆರೆ ಇಲ್ಲಿದೆ. ಭಕ್ತರು ತೀರ್ಥಸ್ನಾನ ಮಾಡಲು ಅನುಕೂಲವಾಗುವಂತೆ ವಿಶಾಲವಾದ ಗದಾ ತೀರ್ಥಕೆರೆಯನ್ನು ಮತ್ತಷ್ಟು ಆಕರ್ಷಣೀಯವಾಗಿ ಮಾಡಲಾಗಿದೆ.
ಅಂದು ಬೆಳಿಗ್ಗೆ ಮಧ್ವ ಓಂಕಾರ ಫ್ರೆಂಡ್ಸ್ ಸೇರಿದಂತೆ ಓಂಕಾರ ಮಹಿಳಾ ಘಟಕ ಮತ್ತು ಬೆಂಗತ್ತೋಡಿ ಓಂಕಾರ ಶ್ರೀ ಶಾರದಾ ಭಜನಾ ಮಂದಿರ ಇದರ ವತಿಯಿಂದ ಹಾಳೆ ಮರದ ಕೆತ್ತೆ ಕಶಾಯ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.