ಕಾರ್ಕಳ : ಮಹಾ ಶಿವರಾತ್ರಿ ಉತ್ಸವಕ್ಕೆ ಸಿದ್ಧತೆ

0
64

ಕಾರ್ಕಳ : ಅನಂತಶಯನ ರಸ್ತೆ ಕಾರ್ಕಳದಲ್ಲಿರುವ ಶ್ರೀ ವಿಶ್ವೇಶ್ವರ ವೇಣುಗೋಪಾಲ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವವು ವಿಜೃಂಭಣೆಯಿಂದ ನಡೆಯಲಿದೆ ಎಂದು ಲೆಕ್ಕ ಪರಿಶೋಧಕ ಕಮಲಾಕ್ಷ ಕಾಮತ್ ಅವರು ತಿಳಿಸಿದರು. ಅವರು ಮಂಗಳವಾರ ಕಾರ್ಕಳ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಶ್ರೀ ಚಿತ್ರಾಪುರ ಮಠದ ಶಿರಾಲಿ ಮಠಾಧೀಶರಾದ ಪರಮಪೂಜ್ಯ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಗಳು ಉತ್ಸವದ ಅಂಗವಾಗಿ ಒಂದು ವಾರ ಕಾಲ ಮೊಕ್ಕಾಂ ಹೂಡಲಿದ್ದು, ಗುರುವರ್ಯರ ಪಾವನ ಉಪಸ್ಥಿತಿಯಲ್ಲಿ ಈ ಧಾರ್ಮಿಕ ಮಹೋತ್ಸವವು ನಡೆಯಲಿದೆ ಎಂದು ಅವರು ಹೇಳಿದರು. ಫೆಬ್ರವರಿ 11, ಫೆಬ್ರವರಿ 18, ರವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಉತ್ಸವ ಆಯೋಜಿಸಲಾಗಿದೆ ಎಂದರು.

ನಿಯೋಜಕ ಕೈಲಾಜೆ ಪ್ರಸನ್ನ ಮಾತನಾಡಿ , ಈ ಮಠವು ಭಟ್ಕಳದ ಶಿರಾಲಿ ಮಠಕ್ಕೆ ಸೇರಿದ ದೇವಾಲಯವಾಗಿದ್ದು, 1881ರಲ್ಲಿ ಈ ದೇವಾಲಯವನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು. ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಈ ಕ್ಷೇತ್ರವು ಅನೇಕ ವರ್ಷಗಳಿಂದ ಭಕ್ತರ ಆಸ್ಥಾನವಾಗಿದೆ ಎಂದರು.

ನಿಕಟಪೂರ್ವ ವ್ಯವಸ್ಥಾಪಕ ಬಿ.ಎಲ್. ಸುಧಾಕರ್ ಮಾತನಾಡಿ, ಭಕ್ತರ ಸೌಲಭ್ಯಕ್ಕಾಗಿ ದೇವಾಲಯದ ಪ್ರಾಂಗಣವನ್ನು ನವೀಕರಿಸಲಾಗಿದ್ದು, ಶುದ್ಧ ಕುಡಿಯುವ ನೀರು, ಪ್ರಸಾದ ವ್ಯವಸ್ಥೆ, ವಾಹನ ನಿಲುಗಡೆ ಹಾಗೂ ಸ್ವಚ್ಛತೆ ವ್ಯವಸ್ಥೆಗಳಿಗೆ ವಿಶೇಷ ಗಮನ ನೀಡಲಾಗಿದೆ ಎಂದರು.

ಉತ್ಸವದ ಅವಧಿಯಲ್ಲಿ ವಿಶೇಷ ಪೂಜೆಗಳು, ಅಭಿಷೇಕ, ರುದ್ರಾಭಿಷೇಕ, ರಾತ್ರಿ ಜಾಗರಣೆ, ಭಜನೆ ಹಾಗೂ ಧಾರ್ಮಿಕ ಪ್ರವಚನಗಳು ನಡೆಯಲಿದೆ ಎಂದರು.

LEAVE A REPLY

Please enter your comment!
Please enter your name here