ಹಿರಿಯ ಲೇಖಕಿ ಲಲಿತಾ ರೈ ನಿಧನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ÷್ಯ ಪೂರ್ವದ ಮೊದಲ ಸಾಲಿನ ಲೇಖಕಿಯರಲ್ಲಿ ಒಬ್ಬರೆಂದು ಗುರುತಿಸಲ್ಪಡುವ ಹಾಗೂ ಸ್ವಾತಂತ್ರ÷್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಹಿರಿಯ ಲೇಖಕಿ ಲಲಿತಾ ರೈ ಅವರು (98) ಅಕ್ಟೋಬರ್11 ರಂದು ಮಂಗಳೂರಿನ ತನ್ನ ಸ್ವಗೃಹದಲ್ಲಿ ನಿಧನರಾದರು.
ಮಂಗಳೂರಿನ ಬೆಸೆಂಟ್ ಪ್ರೌಢಶಾಲೆಯ ಮೆಟ್ರಿಕ್ ತರಗತಿಯ ಮೊದಲ ತಂಡದ ವಿದ್ಯಾರ್ಥಿನಿಯಾಗಿದ್ದ ಲಲಿತಾ ರೈ ಅವರು ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಸೈಂಟ್ ಆನ್ಸ್ ಬಿ. ಎಡ್ ಕಾಲೇಜಿನಲ್ಲಿ ಶಿಕ್ಷಕ ತರಬೇತಿ ಅಧ್ಯಯನ ಮಾಡಿ ಕೆನರಾ ಪ್ರೌಢಶಾಲೆಯಲ್ಲಿ ಅಧ್ಯಾಪಕಿ ವೃತ್ತಿಯನ್ನು ಆರಂಭಿಸಿದ್ದರು. ಮಂಗಳೂರಿನ ಮಹಿಳಾ ಸಭಾ, ಭಗಿನಿ ಸಮಾಜ ಥಿಯೋಪಿಕಲ್ ಸೊಸೈಟಿಯ ಸ್ಥಾಪಕ ಸಂಸ್ಥೆಯಾಗಿದ್ದ ಲಲಿತಾ ರೈ ಅವರು ಮಹಿಳಾ ಸಬಲೀಕರಣದ ಅನೇಕ ಸೇವಾ ಕಾರ್ಯಗಳಲ್ಲಿ ಮಂಚೂಣಿಯಲ್ಲಿದ್ದರು. ವಿವಿಧ ಸಂದರ್ಭ ಮಹಿಳಾಪರ ಚಳವಳಿಯಲ್ಲಿಯೂ ಅವರು ಭಾಗಿಯಾಗಿದ್ದರು. ಕರಾವಳಿ ಲೇಖಕಿಯರ ಹಾಗೂ ವಾಚಕೀಯರ ಸಂಘದ ಸಕ್ರೀಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಲಲಿತಾ ರೈ ಅವರು ಸ್ವಾತಂತ್ರ÷್ಯ ಪೂರ್ವದಲ್ಲೇ ಪತ್ರಿಕೆಗಳಲ್ಲಿ ಕತೆ, ಲೇಖನಗಳನ್ನು ಬರೆದಿದ್ದರು. ‘ಚಿತ್ತಗಾಂಗ್‌ನ ಕ್ರಾಂತಿವೀರರರು’, ಲಲಿತಾ ರೈ ಅವರ ಅನುವಾದಿತ ಕೃತಿ. ‘ಮತ್ತೆ ಬೆಳಗಿತು ಸೊಡರು’, (ಕಥಾ ಸಂಕಲನ), ‘ಇಂಟರ್ನೆಟ್‌ನೊಳಗೆ ಮತ್ತು ಇತರ ಕತೆಗಳು (ಕಥಾ ಸಂಕಲನ) ಗೃಹಣ ಕಳೆಯಿತು (ಕನ್ನಡ ಕಾದಂಬರಿ), ‘ದೇಸಾಂತರ’, ‘ಬೊಂಟೆ ದೇರ್‌ಂಡ್’, (ತುಳುಕಾದಂಬರಿ) ಲಲಿತಾ ರೈ ಅವರ ಪ್ರಮುಖ ಕೃತಿಗಳು.
ಎಸ್. ಯು ಪಣಿಯಾಡಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘ ಪ್ರಶಸ್ತಿ, ರಾಣಿ ಅಬ್ಬಕ್ಕ ಪ್ರಶಸ್ತಿ, ಸಂದೇಶ ಪ್ರತಿಷ್ಠಾನ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ಕರ್ನಾಟಕ ಸರಕಾರದ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಮತ್ತು ಅನೇಕ ಸ್ಥಳೀಯ ಸಂಘ ಸಂಸ್ಥೆಗಳ ಪ್ರಶಸ್ತಿಗಳನ್ನು ಪಡೆದಿದ್ದಾರೆ.
(ಅಂತಿಮ ಸಂಸ್ಕಾರ)
ಅವರ ಅಂತಿಮ ಯಾತ್ರೆಯ ವಿಧಿವಿಧಾನಗಳು ಕೊಡಿಯಲ್‌ಬೈಲು ಗುತ್ತು ಪಶ್ಚಿಮ ರಸ್ತೆಯಯಲ್ಲಿರುವ ಅವರ ಸ್ವಗೃಹದ ‘ಲಲಿತಾ ರೆಸಿಡೆನ್ಸಿ ವಿಶ್ವಾಸ’ ಇಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿದೆ.
ಲಲಿತಾ ರೈ ಅವರ ನಿಧನಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಗಟ್ಟಿ ಕಾಪಿಕಾಡ್ ಇವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.