ಹಿರಿಯ ಯಕ್ಷಗಾನ ಕಲಾವಿದ ತಾಳಮದ್ದಳೆ ಅರ್ಥಧಾರಿ ವಿಟ್ಲ ಶಂಭು ಶರ್ಮ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

0
16

ಮಂಗಳೂರು : ಹಿರಿಯ ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥಧಾರಿ ವಿಟ್ಲ ಶಂಭು ಶರ್ಮ (74) ಶನಿವಾರ ( ನವೆಂಬರ್-01) ಬೆಳಗಿನ ಜಾವ ನಿಧನರಾದರು. ಅವರ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿಯ ಸರ್ವ ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಕುಂಬಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿ ಎಂಬಲ್ಲಿ ಕೃಷ್ಣ ಭಟ್ಟ – ಹೇಮಾವತಿ ದಂಪತಿ ಪುತ್ರನಾಗಿ 1951 ಅಕ್ಟೋಬರ್ 13 ರಂದು ಜನಿಸಿದ ಶಂಭು ಶರ್ಮ, ತಾಳಮದ್ದಳೆ ಅರ್ಥ ಹೇಳುವ ಮೂಲಕ ಯಕ್ಷ ಕ್ಷೇತ್ರಕ್ಕೆ ಕಾಲಿಟ್ಟವರು. ನಂತರ ಇದೇ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರಸಿದ್ಧ ಅರ್ಥಧಾರಿಯಾಗಿ ಹೆಸರು ಮಾಡಿದರು.

ಕುಂಬಳೆ ಎಡನಾಡು ಮೂಲದ ವಿಟ್ಲ ಶಂಭು ಶರ್ಮರೆಂದೇ (74) ಪ್ರಸಿದ್ಧರಾಗಿದ್ದ ಅವರು ವೃತ್ತಿಯಲ್ಲಿ ಉಪನ್ಯಾಸರಾಗಿ ಪ್ರವೃತ್ತಿ ಯಲ್ಲಿ ಕಲಾವಿದರಾಗಿದ್ದರು. ತರ್ಕಪೂರ್ಣ ಅರ್ಥಗಾರಿಕೆ, ವಿಶಿಷ್ಟ ಸ್ವರಶಕ್ತಿಯಿಂದ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು.

ಸುಬ್ರಹ್ಮಣ್ಯ ‌ಮೇಳ, ಕದ್ರಿ ಮೇಳ ಮೊದಲಾದ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಪಾತ್ರ‌ ನಿರ್ವಹಿಸುತ್ತಿದ್ದರು. ಅವರು ಪತ್ನಿ, ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ವಿಟ್ಲ ಶಂಭು ಶರ್ಮ ನಿಧನದಿಂದ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬ ಬಳಗದವರಿಗೆ ನೀಡಲೆಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿ ಸರ್ವ ಸದಸ್ಯರು ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here