ಕಾಸರಗೋಡು: ಜಿಲ್ಲೆಯ ಚೆರುವತ್ತೂರಿನ ವೀರಾಮಲ ಬೆಟ್ಟ ಕುಸಿತವಾಗಿದ್ದು, ಕೇರಳ, ಕನ್ಯಾಕುಮಾರಿ- ಪನ್ವೇಲ್ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಮಾಡಲಾಗಿದೆ. ಸದ್ಯ ಸಂಚಾರಕ್ಕೆ ಬದಲಿ ರಸ್ತೆ ಮಾರ್ಗವನ್ನು ಸ್ಥಳೀಯಾಡಳಿತ ಸೂಚಿಸಿದ್ದು, ಮಣ್ಣು ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಹೆದ್ದಾರಿಯಲ್ಲಿ ಹೆಚ್ಚಿನ ವಾಹನ ಸಂಚಾರ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ.
ಈ ಹಿಂದೆಯೂ ಇದೆ ಭಾಗದಲ್ಲಿ ಭೂ ಕುಸಿತವಾಗಿ ಮಣ್ಣಿನಡಿ ಸಿಲುಕಿ ಕಾರ್ಮಿಕರು ಪಾರಾಗಿದ್ದರು. ಈ ಭಾಗದಲ್ಲಿ ಹಲವು ಸಮಯದಿಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಇಂದು ಮಧ್ಯಾಹ್ನದ ವೇಳೆಗೆ ಸಂಚಾರ ಸಾಮಾನ್ಯ ಸ್ಥಿತಿಗೆ ಬರುವ ನಿರೀಕ್ಷೆಯಿದೆ. ಸದ್ಯ ಸ್ಥಳಕ್ಕೆ ಕಾಸರಗೋಡು ಎಸ್.ಪಿ ವಿಜಯ್ ಭರತ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಬಿರುಸಾಗಿದ್ದು, ಧಾರಾಕಾರ ಮಳೆಗೆ ಮಲೆನಾಡು ಭಾಗದ ವಿವಿಧೆಡೆ ಗುಡ್ಡ ಕುಸಿತ ಮುಂದುವರಿದಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಸಮೀಪದ ದೇವಿಮನೆ, ಶೃಂಗೇರಿ ತಾಲೂಕಿನ ನೆಮ್ಮಾರ್, ಮಂಗಳೂರಿನ ಕದ್ರಿ, ಕಂಕನಾಡಿಗಳಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಕರಾವಳಿ ಭಾಗದಲ್ಲೂ ಮಳೆ ಅಬ್ಬರಿಸುತ್ತಿದ್ದು, ಭಟ್ಕಳದಲ್ಲಿ 50 ವರ್ಷದ ವೃದ್ಧ ಹಾಗೂ 2 ವರ್ಷದ ಚಿಕ್ಕ ಮಗು ನೀರಲ್ಲಿ ಕೊಚ್ಚಿಹೋಗಿದ್ದಾರೆ. ಬೆಳ್ತಂಗಡಿ ಸಮೀಪ ಮರ ಬಿದ್ದು, ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ.