ಕುಂದಾಪುರ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಶಂಕರನಾರಾಯಣ ಇದರ ನೂತನ ಶಿಲಾಮಯ ಗರ್ಭಗುಡಿಗೆ ಶಿಲಾಮೂಹೂರ್ತ ಕಾರ್ಯಕ್ರಮ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ, ಸಮಗ್ರ ಜೀರ್ಣೋದ್ದಾರ ಸಮಿತಿಯ ಘೋಷಣೆ ಕಾರ್ಯಕ್ರಮವು ಆ. ೧೭ರಂದು ನಡೆಯಿತು.
ಶಿಲಾಮುಹೂರ್ತ ನೆರವೇರಿಸಿ ನಂತರ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೈದರಾಬಾದ್ ಸುಪ್ರಭಾತ ಗ್ರೂಪ್ ಆಪ್ ಹೋಟೆಲ್ಸ್ ನ ಮಾಲಕರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ದೇವಸ್ಥಾನದ ಜೀರ್ಣೋದ್ದಾರ ಕಾರ್ಯವು ಒಂದು ಪುಣ್ಯದ ಕೆಲಸವಾಗಿದೆ ಅದನ್ನು ನಾನು ಮಾಡಿದೆ ನಾನು ಮಾಡಿದೆ ಎನ್ನುವುದಕ್ಕಿಂತ ಅದರಲ್ಲಿ ನಾವು ಭಾಗಿಯಾಗಿರುವುದೇ ನಮ್ಮ ಅದೃಷ್ಟ ಎಂದು ಹೇಳಬೇಕು, ಇದು ಒಬ್ಬರಿಂದ ಆಗುವ ಕೆಲಸವಲ್ಲ ನಾಲ್ಕು ಜನ ಸೇರಿದರೆ ಮಾತ್ರ ಇಂತಹ ಕಾರ್ಯ ಸಾಧ್ಯ , ಹಾಗಾಗಿ ಊರಿನ ಪ್ರತಿಯೊಬ್ಬರೂ ತನು ಮನ ಧನ ಯಾವುದು ಸಾಧ್ಯವೋ ಅದನ್ನು ನೀಡಿ ಈ ಪುಣ್ಯ ಕಾರ್ಯದಲ್ಲಿ ಬಾಗಿಗಳಾಗಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸೂರ್ಯನಾರಾಯಣ ಬಾಯರಿ ಮಾತನಾಡಿ, ಕಾರ್ಣಿಕ ಕ್ಷೇತ್ರವಾದ ಈ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಹಮ್ಮಿಕೊಂಡಿದ್ದು ಪ್ರತಿಯೊಬ್ಬರೂ ಈ ಒಳ್ಳೆಯ ಕಾರ್ಯದಲ್ಲಿ ಭಾಗವಹಿಸಿ ತಮ್ಮ ಕೈಯಲ್ಲಿ ಸಾಧ್ಯವಾದ ಸೇವೆಯನ್ನು ನೀಡಿ ದೇವಸ್ಥಾನದ ಜೀರ್ಣೋದ್ದಾರದ ಕೆಲಸ ಆದಷ್ಟು ಬೇಗ ನೆರವೇರುವಂತೆ ಸಹಕರಿಸಬೇಕು ಎಂದರು.
ದಾಂಡೇಲಿಯ ಉದ್ಯಮಿ ಎಸ್. ಪ್ರಕಾಶ್ ಶೆಟ್ಟಿ ಗೈನಾಡಿಯವರು ಜೀರ್ಣೋದ್ಧಾರ ಕಾರ್ಯದ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದರು, ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ದಿನಕರ ತೋಳಾರ್, ಗೌರವಾಧ್ಯಕ್ಷರಾದ ಬಂಟಕೋಡು ಗಣಪಯ್ಯ ಶೆಟ್ಟಿ, ಹಿರಿಯರಾದ ಕುತ್ಯಾರು ನಾರಾಯಣ ಶೆಟ್ಟಿ ಗಾವಳಿ,ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಆರ್.ನವೀನಚಂದ್ರ ಶೆಟ್ಟಿ ರಟ್ಟಾಡಿ, ಹಾಲಾಡಿ ಶ್ರೀ ಮರಳುಚಿಕ್ಕು ದೇವಸ್ಥಾನದ ಆಡಳಿತ ಧರ್ಮದರ್ಶಿ ಅಮರನಾಥ ಶೆಟ್ಟಿ, ವಿಜಯಲಕ್ಷ್ಮೀ ಶೆಡ್ತಿ ಗಾವಳಿ,ರಾಜೀವ ಶೆಟ್ಟಿ ಶಾನ್ಕಟ್ಟು ಮತ್ತು ಆಡಳಿತ ಸಮಿತಿ ಹಾಗೂ ಜೀರ್ಣೋದ್ದಾರ ಸಮಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಸೂರ್ಯಪ್ರಕಾಶ ದಾಮ್ಲೆ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು, ಹಾಲಾಡಿ ಸಂತೋಷ ಶೆಟ್ಟಿ ನೂತನ ಜೀರ್ಣೋದ್ದಾರ ಸಮಿತಿಯ ವಿವರವನ್ನು ಮಂಡಿಸಿದರು, ದಿನಕರ ತೋಳಾರ್ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.