ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ ಆಶ್ರಯದಲ್ಲಿ ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ-2025, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ 35ನೇ ಸಂಸ್ಥಾಪನಾ ದಿನಾಚರಣೆ ಮತ್ತು ಶಿವರಾಮ ಕಾಸರಗೋಡು 60ನೇ ಜನ್ಮದಿನೋತ್ಸವ ನವಂಬರ್ 4ರಂದು ಮೀಪುಗುರಿ-ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬೆಳಗ್ಗೆ 6.30ರಿಂದ ಕನ್ನಡ ಗ್ರಾಮದಲ್ಲಿ ಸುಪ್ರಭಾತ ಗಾಯನ, ಬೆಳಗ್ಗೆ 10.00ಕ್ಕೆ ಕಾಸರಗೋಡು ನಗರಸಭಾ ಕೌನ್ಸಿಲರ್ ಶ್ರೀಮತಿ ಶಾರದಾ ಬಿ. ರಾಷ್ಟ್ರ ಧ್ವಜಾರೋಹಣ ಗೈಯಲಿದ್ದಾರೆ. ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ದೀಪಾರಾಧನೆ ಗೈಯುವರು. 10.30ಕ್ಕೆ ಡಾ| ಕನ್ಯಾನ ಸದಾಶಿವ ಶೆಟ್ಟಿ ಸೇವಾ ಬಳಗ ಕೇಂದ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ ಶಿವರಾಮ ಕಾಸರಗೋಡು 60 ಫೋಟೋ ಗ್ಯಾಲರಿ ಅನಾವರಣಗೊಳಿಸುವರು. 11.00ಕ್ಕೆ ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ-2025 ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಉದ್ಘಾಟಿಸಲಿರುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಸಿ. ಸೋಮಶೇಖರ ಸರ್ವಾಧ್ಯಕ್ಷತೆ ವಹಿಸುವರು. 11.30ಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪ್ರಾಯೋಜಕತ್ವದಲ್ಲಿ ‘ಬಹು ಸಂಸ್ಕೃತಿಯ ಕಾಸರಗೋಡು’ ರಾಜ್ಯಮಟ್ಟದ ವಿಚಾರಗೋಷ್ಠಿ ನಡೆಯಲಿದೆ. ಆ ಬಳಿಕ 12.30ರಿಂದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2.00ರಿಂದ ಕಾಸರಗೋಡು ಕನ್ನಡಿಗ-ಗಡಿನಾಡು-ಹೊರನಾಡು-ಕನ್ನಡಿಗ- ಕರ್ನಾಟಕ ಸರಕಾರ ಗಮನಕ್ಕೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯುವುದು. ನಂತರ ಖ್ಯಾತ ಗಾಯಕರಿಂದ ಸುಗಮ ಸಂಗೀತ ಗಾಯನ ನಡೆಯಲಿದೆ. ಸಂಜೆ 4.00ರಿಂದ ಶಿವರಾಮ ಕಾಸರಗೋಡು 60ನೇ ಜನ್ಮದಿನೋತ್ಸವ, ಕಾಸರಗೋಡು ಗೋ-ಕುಟೀರಕ್ಕೆ ಭೂಮಿಪೂಜೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಶಿವರಾಮ ಕಾಸರಗೋಡು ಅವರಿಗೆ ಅಭಿನಂದನೆ ಸಲ್ಲಿಸಿ ಕೇರಳ-ಕರ್ನಾಟಕ ಭವನದ ಭಿತ್ತಿಪತ್ರ ಬಿಡುಗಡೆಗೊಳಿಸುವರು. ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡುವರು. ಕರ್ನಾಟಕ ಸರಕಾರದ ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ವಾಟಾಳ್ ನಾಗರಾಜ್ ಸಮಾರೋಪ ಉದ್ಘಾಟಿಸುವರು. ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕುನ್ನು, ಟಿ. ಎಂ. ಶಾಹಿದ್ ತೆಕ್ಕಿಲ್, ಡಾ| ಕೃಷ್ಣ ಪ್ರಸಾದ್ ಕೂಡ್ಲು, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ ಕೂಡ್ಲು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀ ಸಿ. ಎನ್. ಅಶೋಕ್, ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ-ಪ್ರಧಾನ ಸಂಚಾಲಕ ಡಾ| ಎಂ. ಜಿ. ಆರ್. ಅರಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡ ಸಾಂಸ್ಕೃತಿಕ ರಾಯಭಾರಿಗಳು ಹಾಗೂ ವಿವಿಧ ಕ್ಷೇತ್ರದ 60 ಮಂದಿ ಕನ್ನಡ ಸಾಧಕರಿಗೆ “ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ಪ್ರದಾನ ನಡೆಯುವುದು. ಆ ಬಳಿಕ ರಾಜ್ಯಮಟ್ಟದ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

