ಕೊಡೂರು: ವೀರಮಾಸ್ತಿಕಲ್ಲು ಮತ್ತು ಮಡಕೆಗಳ ಅಧ್ಯಯನ

0
53

ಕೊಪ್ಪ ತಾಲ್ಲೂಕಿನ ಕೊಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡೂರು ಪ್ರದೇಶದಲ್ಲಿ ಸ್ಥಳೀಯರು ಮಾಸ್ತಿಯಮ್ಮ ಎಂದು ಪೂಜಿಸಿಕೊಂಡು ಬಂದಿರುವ ಈ ವೀರಮಾಸ್ತಿಕಲ್ಲಿನ ಅಧ್ಯಯನವನ್ನು ಸತೀಶ ತುಮಖಾನೆ ಇವರ ಪ್ರಾಥಮಿಕ ಮಾಹಿತಿಯ ಮೇರೆಗೆ ಇತಿಹಾಸ ಮತ್ತು ಪುರಾತತ್ತ್ವ ಸಂಶೋದನಾರ್ಥಿ ನ. ಸುರೇಶ ಕಲ್ಕೆರೆ ಇವರು ಅಧ್ಯಯನ ಮಾಡಿರುತ್ತಾರೆ.

ಈ ವೀರಮಾಸ್ತಿಕಲ್ಲು ಸುಮಾರು 6 ಅಡಿ ಎತ್ತರ ಮತ್ತು 2.5 ಅಡಿ ಅಗಲವನ್ನು ಹೊಂದಿದ್ದು, ಬಗೆಬಗೆಯ ಪುಷ್ಪಪಟ್ಟಿಕೆಗಳಿಂದ ಅಲಂಕರಿಸಲ್ಪಟ್ಟ ಐದು ಪಟ್ಟಿಕೆಗಳನ್ನು ಹೊಂದಿರುತ್ತದೆ. ಪ್ರಥಮ (ಕೆಳಗಿನ) ಪಟ್ಟಿಕೆಯಲ್ಲಿ ಬಿಲ್ಲು-ಬಾಣ, ಕತ್ತಿ-ಗುರಾಣಿಗಳೊಂದಿಗೆ ರಣರಂಗದಲ್ಲಿ ಎದುರಾಳಿ ಸೈನ್ಯದೊಂದಿಗೆ ವೀರನು ಹೋರಾಟ ಮಾಡುವ ಯುದ್ಧ ಸನ್ನಿವೇಶವನ್ನು ಕೆತ್ತಲಾಗಿದೆ. ಈ ಯುದ್ಧದಲ್ಲಿ ವೀರಮರಣ ಹೊಂದಿದ ವೀರನನ್ನು ರಾಜಮರ್ಯಾದೆಯಲ್ಲಿ ಅಂದರೆ ಛತ್ರ (ತತ್ರ), ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಕೊಂಡೊಯ್ಯುತ್ತಿರುವ ಕೆತ್ತನೆಯನ್ನು ಇದರ ನಂತರದ ಪಟ್ಟಿಕೆಯಲ್ಲಿ ತೋರಿಸಲಾಗಿದೆ. ಮೂರನೇ ಪಟ್ಟಿಕೆಯಲ್ಲಿ ಮರಣಹೊಂದಿದ ಪತಿಯೊಂದಿಗೆ ಸತಿಯರ ಚಿತ್ರಣವನ್ನು ಬಿಂಬಿಸಲಾಗಿದೆ. ತದನಂತರದ ಪಟ್ಟಿಕೆಯಲ್ಲಿ ಕುಂಭ-ಪದ್ಮದ ಜೊತೆ ಒಕ್ಕೈಯಲ್ಲಿ ಲಿಂಬೆಯನ್ನು ಹಿಡಿದಿರುವ ಕೆತ್ತನೆಯ ಜೊತೆಗೆ ಸತಿ ಪತಿಯು ಕೈಮುಗಿದು ಕೆತ್ತನೆಯನ್ನು ಮಾಡಲಾಗಿದೆ. ಕೊನೆಯ ಪಟ್ಟಿಕೆಯಲ್ಲಿ ಅಂಜಲಿ ಮುದ್ರೆಯಲ್ಲಿ ಪದ್ಮಾಸನದಲ್ಲಿ ಕುಳಿತಿರುವ ಸತಿ ಪತಿಯರ ಜೊತೆಗೆ ನಂದಿವಾಹನ ಶಿವನಿಗೆ ಅಂದರೆ ಶಿವಲಿಂಗಕ್ಕೆ ಪೂಜಿಸುತ್ತಿರುವ ಯೋಗಿಯ ಕೆತ್ತನೆಯಿದೆ. ಈ ವೀರ ಮತ್ತು ಸತಿಯ ತ್ಯಾಗ ಬಲಿದಾನವು ಅಜರಾಮರವಾಗಿರಬೇಕೆಂದು ಸೂರ್ಯ-ಚಂದ್ರರ ಕೆತ್ತನೆಯನ್ನು ಮಾಡಲಾಗಿದೆ.

ಅಧ್ಯಯನದ ದೃಷ್ಟಿಯಿಂದ ಈ ವೀರಮಾಸ್ತಿಗಲ್ಲು 15-16ನೇ ಶತಮಾನಕ್ಕೆ ಸೇರುತ್ತದೆ ಎಂದು ಹಾಗೆಯೇ ವೀರಮಾಸ್ತಿಕಲ್ಲಿನ ತಳಭಾಗದಲ್ಲಿ ವಿವಿಧ ಗಾತ್ರದ ಮಡಕೆಗಳು ಲಭ್ಯವಾಗಿದ್ದು ಇವುಗಳು ನಂತರದ ಕಾಲದಲ್ಲಿ ಅಂದರೆ ಸುಮಾರು 17-18ನೇ ಶತಮಾನಕ್ಕೆ ಸೇರಿರುತ್ತದೆ ಎಂದು ಸಂಶೋಧನಾರ್ಥಿಯು ಅಭಿಪ್ರಾಯಪಟ್ಟಿದ್ದಾರೆ.

ವೀರಮಾಸ್ತಿಗಲ್ಲಿನ ವೈಶಿಷ್ಟ್ಯ
ಆಯಾಮ 1: ಈ ವೀರಮಾಸ್ತಿಗಲ್ಲಿನಲ್ಲಿ, ಯುದ್ಧದಲ್ಲಿ ವೀರಮರಣ ಹೊಂದಿದ ವೀರನಿಗೆ ಇಬ್ಬರು ಪತಿಯಂದಿರು ಇದ್ದಿರಬಹುದೆಂದು ಮೂರನೇ ಪಟ್ಟಿಕೆಯನ್ನು ಸರಿಯಾಗಿ ಗಮನಿಸಿದರೆ ತಿಳಿಯಬಹುದು. ನಾಲ್ಕನೇ ಪಟ್ಟಿಕೆಯಲ್ಲಿ ವೀರನ ಮರಣ ನಂತರ ಇತನ ಇಬ್ಬರು ಪತ್ನಿಯರಲ್ಲಿ ಒಬ್ಬಳನ್ನು ಸತಿಯ ರೂಪದಲ್ಲಿ ತೋರಿಸದರೇ ಇನ್ನೊಬ್ಬಳನ್ನು ಸಾಂಕೇತಿಕವಾಗಿ ಒಕ್ಕೈ ರೂಪದಲ್ಲಿ ತೋರಿಸಿರಬಹುದು. ಹಾಗಾಗಿ ಇತನ ಇಬ್ಬರೂ ಪತ್ನಿಯರು ಕೂಡ ಸತಿಯಾಗಿರಬಹುದೆಂದು ಊಹೆ ಮಾಡಬಹುದು.
ಆಯಾಮ 2: ಇದರ ಪ್ರಕಾರ ವೀರನ ಒಬ್ಬಳು ಪತ್ನಿ ಮಾತ್ರ ಸತಿಯಾಗಿರಬಹುದು ಏಕೆಂದರೆ ಇದಕ್ಕೆ ಸಾಕ್ಷಿಯಾಗಿ ಕೊನೆಯ ಪಟ್ಟಿಕೆಯಲ್ಲಿ, ಪರಲೋಕದಲ್ಲಿ ವೀರನ ಜೊತೆ ಒಬ್ಬಳು ಸತಿಯನ್ನು ಮಾತ್ರ ತೋರಿಸಲಾಗಿದೆ. ಇನ್ನೊಬ್ಬಳನ್ನು ತೋರಿಸಿಲ್ಲದ ಕಾರಣ ಈಕೆ ಬದುಕಿರಬಹುದೆಂಬ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಮನುಷ್ಯಾಕೃತಿಯ ಮಡಕೆಗಳ ವೈಶಿಷ್ಟ್ಯ
ಮಲೆನಾಡಿನ ಹೆಚ್ಚಿನ ಸ್ಥಳಗಳಲ್ಲಿ ಮುಖ್ಯವಾಗಿ ಸ್ಥಳೀಯರು ‘ದೇವಿಬನ’ ಎಂದು ಕರೆಯುವ ಜಾಗದಲ್ಲಿ ಮನುಷ್ಯಾಕೃತಿಯನ್ನು (ಸ್ತ್ರೀ) ಹೊಂದಿರುವ ಮಡಕೆಗಳು ಸಿಕ್ಕಿರುವ ಪುರಾವೆಗಳಿವೆ. ಆದರೆ ಕೊಪ್ಪ ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ವೀರಮಾಸ್ತಿಗಲ್ಲಿನ ಜೊತೆ ಮನುಷ್ಯಾಕೃತಿಯ ಮಡಕೆಗಳು ದೊರಕಿವೆ. ಮುಖ್ಯವಾಗಿ ದೇವಿಬನಗಳಲ್ಲಿ ಇಂತಹ ಮಡಕೆಗಳನ್ನು ‘ಫಲವಂತಿಕೆ’ ಅಥವಾ ‘ಮಾತೃತ್ವ’ದ ರೂಪದಲ್ಲಿ ಹರಕೆಯಾಗಿ ಒಪ್ಪಿಸಲಾಗುತ್ತದೆ. ಅಂದರೆ ಸಂತಾನ ಪ್ರಾಪ್ತಿಗಾಗಿ, ಸುಖಕರ ಹೆರಿಗೆಗಾಗಿ, ಸಣ್ಣ ಮಕ್ಕಳಿಗೆ ರೋಗಗಳು ಬಂದಂತ ಸಂದರ್ಭದಲ್ಲಿ ಅಥವಾ ಬರದಂತೆ ಮನುಷ್ಯ ರೂಪದ ಮಡಕೆಗಳನ್ನು ಒಪ್ಪಿಸಲಾಗುತ್ತದೆ. (ಇದೇ ರೀತಿ “ಹುಲಿಬನ”ಗಳನ್ನು ಸಹ ಕಾಣಬಹುದು. ಇಲ್ಲಿ ಕಾಡುಪ್ರಾಣಿಗಳಿಂದ ಸಾಕುಪ್ರಾಣಿಗಳ ಹಾಗೆಯೇ ಕೃಷಿಭೂಮಿ ರಕ್ಷಣೆಗಾಗಿ ಪ್ರಾಣಿರೂಪದ ಹೆಚ್ಚಾಗಿ ಹುಲಿ ಆಕೃತಿಯನ್ನು ಹೊಂದಿರುವ ಮಡಕೆಗಳನ್ನು ಒಪ್ಪಿಸಲಾಗುತ್ತದೆ). ಹೆಚ್ಚಾಗಿ ಇಂತಹ ಜಾನಪದ ಆಚರಣೆಗಳನ್ನು/ಹರಕೆಗಳನ್ನು ತಮ್ಮ ಸುಖ-ಕಷ್ಟಗಳ ಸಂದರ್ಭದಲ್ಲಿ ಮಾಡಲಾಗುತ್ತಿತ್ತು.

ಈ ವೀರಮಾಸ್ತಿಗಲ್ಲಿನ ಸುತ್ತಲೂ ಸ್ಥಳೀಯವಾಗಿ ದೊರಕುವ ಕಲ್ಲಿನಿಂದ ಪ್ರಾಕಾರವನ್ನು ನಿರ್ಮಿಸುವುದರ ಮೂಲಕ ವೀರಸತಿಗಲ್ಲನ್ನು ದೈವತ್ವದ ಪ್ರತೀಕವೆಂದು ಭಾವಿಸಿ, ನಂತರದ ಕಾಲದಲ್ಲಿ ಅಂದರೆ ಸುಮಾರು 17-18ನೇ ಶತಮಾನದಲ್ಲಿ ಸುಟ್ಟ ಮಣ್ಣಿನಿಂದ ಮಾಡಲ್ಪಟ್ಟ ಮನುಷ್ಯಾಕೃತಿಯ ಮಡಕೆಗಳನ್ನು ಜನರು ತಮ್ಮ ಸುಖ ಮತ್ತು ಕಷ್ಟಗಳ ಸಂದರ್ಭದಲ್ಲಿ ಹರಕೆಯ ರೂಪದಲ್ಲಿ ವೀರಮಾಸ್ತಿಗಲ್ಲಿಗೆ ಒಪ್ಪಿಸಿಕೊಂಡು ಬಂದಿರಬಹುದು. ಇದಕ್ಕೆ ಪೂರಕವೆಂಬಂತೆ ಇಲ್ಲಿ ಇಂದಿಗೂ ಸಹ ವರುಷಂಪ್ರತಿ ಪೂಜೆಯನ್ನು ನೆರವೇರಿಸಕೊಂಡು ಬರುತ್ತಿದ್ದು ಆದರೆ ಇತ್ತೀಚಿನ ಶತಮಾನಗಳಿಂದ ಮಡಕೆಯನ್ನು ಒಪ್ಪಿಸಿರುವ ನಿದರ್ಶನಗಳು ಕಂಡುಬರುವುದಿಲ್ಲ. ಪ್ರಸ್ತುತ ದೊರಕಿರುವ 9 ಮಡಕೆಗಳಲ್ಲಿ 5 ಮಡಕೆಗಳು ಗಾತ್ರದಲ್ಲಿ ಸಣ್ಣದಾಗಿದ್ದು, ತಳಭಾಗದಲ್ಲಿ ಮನುಷ್ಯಾಕೃತಿಯ ಅಂದರೆ ಕಣ್ಣು, ಮೂಗು ಮತ್ತು ಬಾಯಿಯ ರಚನೆಯನ್ನು ಹೊಂದಿದೆ. 4 ಮಡಕೆಗಳು ಪೂರ್ಣ ಪ್ರಮಾಣದ ಮಡಕೆಗಳಾಗಿದ್ದು ಇದರಲ್ಲಿ ಸ್ತನ ಭಾಗದ ರಚನೆಯನ್ನು ತೋರಿಸಲಾಗಿದೆ. (ಈ ಪ್ರದೇಶದಲ್ಲಿ ಆಳವಾದ ಕ್ಷೇತ್ರಕಾರ್ಯ ಕೈಗೊಂಡರೆ ಇನ್ನೂ ಹೆಚ್ಚಿನ ಮಡಕೆಗಳು ದೊರೆಯುವ ಸಾಧ್ಯತೆಯಿದೆ). ಈ ಸಣ್ಣ ಗಾತ್ರದ ಮಡಕೆಗಳು ದೊಡ್ಡ ಗಾತ್ರದ ಮಡಕೆಗೆ ಮುಚ್ಚಳದಂತೆ ಜೋಡಣೆಯಾಗುವುದರ ಜೊತೆಗೆ ಒಂದು ಪೂರ್ಣ ಪ್ರಮಾಣದ ಮನುಷ್ಯಾಕೃತಿಯನ್ನು ಹೋಲುತ್ತದೆ. ಹಾಗಾಗಿ ಈ ಸಣ್ಣ ಗಾತ್ರದ ಮಡಕೆಗಳು ದೊಡ್ಡ ಮಡಕೆಯ ಮುಚ್ಚಳವಾಗಿರುವ ಸಾಧ್ಯತೆ ಹೆಚ್ಚಾಗಿಯೇ ಇದೆ. ಈ ಮಡಕೆಗಳು ಮತ್ತು ಸ್ಥಳೀಯ ಜಾನಪದ ಆಚರಣೆಯ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕೆಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ.

ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸೇವಾ ಟ್ರಸ್ಟ್-ಕೊಡೂರು ಇದರ ಅಧ್ಯಕ್ಷರಾದ ರಾಮಚಂದ್ರ ಮತ್ತು ಕಾರ್ಯದರ್ಶಿಗಳಾದ ಚಿದಂಬರ್ ಅವರು ಸಹಕಾರ ನೀಡಿರುತ್ತಾರೆ.

LEAVE A REPLY

Please enter your comment!
Please enter your name here