ಕುಂದಾಪ್ರ ಕನ್ನಡ ಭಾಷೆಯ ಸೊಗಡಿನ ದಾಖಲೀಕರಣ ಅಗತ್ಯ- ಕೆ.ಜಯಪ್ರಕಾಶ್ ಹೆಗ್ಡೆ
ಕೋಟ: ಕುಂದಾಪ್ರ ಕನ್ನಡದ ನಿಜವಾದ ಸೊಗಡು ಕಾಣ ಸಿಗುವುದು ಗ್ರಾಮಾಂತರ
ಭಾಗದಲ್ಲಿ. ಗ್ರಾಮೀಣ ಭಾಗದ ನಟ್ಟಿ ನೆಡುವ ಹೆಂಗಸರು, ಉಳುಮೆ ಮಾಡುವ ಗಂಡಸರು, ಭತ್ತ
ತುಳಿಯುವವರು ಹೀಗೆ ಹತ್ತಾರು ವಿಭಾಗಗಳಿಂದ ಕುಂದಾಪ್ರ ಕನ್ನಡದ ಸೊಗಡು ಹರಿದು ಬಂದಿದೆ.
ಅವೆಲ್ಲದರ ದಾಖಲೀಕರಣ ಅಗತ್ಯ ಎಂದು ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಮಾಜಿ
ಸಚಿವ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಅವರು ಕೋಟ ಡಾ. ಶಿವರಾಮ ಕಾರಂತ ಪ್ರತಿಷ್ಠಾನ, ಬ್ರಹ್ಮಾವರ ತಾಲೂಕು ಪತ್ರಕರ್ತರ
ಸಂಘ, ಕೋಟತಟ್ಟು ಗ್ರಾ.ಪಂ., ಉಸಿರು ಸಂಸ್ಥೆ ಕೋಟ, ಗೀತಾನಂದ ಫೌಂಡೇಶನ್, ಅರಿವು
ಕೇಂದ್ರ ಡಿಜಿಟಲ್ ಗ್ರಂಥಾಲಯ ಆಶ್ರಯದಲ್ಲಿ ಮೇ ೪ಕ್ಕೆ ಕೋಟದ ಕಾರಂತ ಥೀಮ್
ಪಾರ್ಕನಲ್ಲಿ ನಡೆದ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಮಾಡಿ
ಮಾತನಾಡಿದರು.
ಭಾಷಿ ಬೆಳ್ಸಕರೆ ಮೊದಲ್ ಮಕ್ಕಳಿಗ್ ಹೇಳಿ ಕೊಡ್ಕ್. ಸರಕಾರ, ಕನ್ನಡ ಮತ್ತು ಸಂಸ್ಕೃತಿ
ಇಲಾಖೆ ಕುಂದಾಪ್ರ ಭಾಷಿ ಬಗ್ಗೆ ಕೆಲಸ ಮಾಡಬೇಕು ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಾ. ಅಣ್ಣಯ್ಯ ಕುಲಾಲ ಉಳ್ತೂರು
ಮಾತನಾಡಿ, ನಮ್‌ಭಾಷಿನ ಪ್ರೀತಿ ಮಾಡ್ಕ್ ; ಬೇರೆ ಭಾಷಿ ಬಗ್ಗೆ ಆಸಕ್ತಿ ತೋರ್ಸ್ಕ್
ಆಗಲಿಕೆ ಎಲ್ಲ ವಿಚಾರ ತಿಳುಕೆ ಸಾಧ್ಯ ಕುಂದಾಪ್ರ ಕನ್ನಡದ ಈ ಕಾರ್ಯಕ್ರಮ ಒಂದಷ್ಟ್
ಜನರಿಗೆ ಪ್ರೇರಣೆಯಾಗಲಿ ಎಂದರು.
ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಬಾರಿಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರಂತ ಪ್ರತಿಷ್ಠಾನದ್ ಕಾರ್ಯಧ್ಯಕ್ಷ ಆನಂದ ಸಿ.ಕುಂದರ್, ಕನ್ನಡ ಸಂಸ್ಕೃತಿ ಇಲಾಖಿ
ಸಹಾಯಕ ನಿರ್ದೇಶಕಿ ಪೂರ್ಣಿಮಾ, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ, ಕಾರಂತ ಟ್ರಸ್ಟ್ ಟ್ರಸ್ಟಿ ಸುಬ್ರಾಯ ಆಚಾರ್ಯ ಇದ್ದರು.
ಕಾರ್ಯಕ್ರಮದ್ ಸಂಯೋಜಕ, ಕಾರಂತ ಟ್ರಸ್ಟಿನ್ ಕಾರ್ಯದರ್ಶಿ ನರೇಂದ್ರ ಕುಮಾರ್
ಸ್ವಾಗತಿಸಿ, ಸತೀಶ್ ವಡ್ಡರ್ಸೆ ಕಾರ್ಯಕ್ರಮದ್ ಆಶಯದ ಬಗ್ಗೆ ಮಾತನಾಡಿದರು..
ಬ್ರಹ್ಮಾವರ ತಾಲೂಕು ಕ.ಸಾ.ಪ. ಅಧ್ಯಕ್ಷ ರಾಮಚಂದ್ರ ಐತಾಳ ಧನ್ಯವಾದ ಸಲ್ಲಿಸಿದರು.ಕವಿಗೋಷ್ಠಿ, ಕುಂದಕನ್ನಡದ ಹರಟೆ, ಅಧ್ಯಕ್ಷರ ಜತಿಗೆ ಮಾತುಕತೆ ನಡೆಯಿತು.ಕುಂದಾಪ್ರ ಜನರ ಭಾಷಿ ಎಷ್ಟ್ ಚೆಂದ್ವೋ ಇಲ್ಲಿನ್ ಸಂಸ್ಕೃತಿಯೂ ಅಷ್ಟೇ ಚೆಂದ. ಹೂವಿನ್ಕೋ ಲ್, ದಿಮ್ಸಾಲ್, ಬೊಂಬಿಯಾಟ, ಯಕ್ಷಗಾನ, ಹೌಂದರಾಯನ ಓಲ್ಗಾ, ಗೋಂಡ್ಲ, ತುಳ್ಸಿ ಪೂಜೆ
ಇದೆಲ್ಲ ಬೇರೆಲ್ಲೂ ಕಾಂಬುಕ್ ಸಿಕ್ಕುದಿಲ್ಲ. ಇದನ್ನ ಮುಂದಿನ ಜನಾಂಗಕ್ಕೆ ಪರಿಚಯ ಮಾಡು
ಅಗತ್ಯ ಇತ್.ಪ್ರಪಂಚದಂಗೆ ಇಪ್ಪತ್-ಇಪ್ಪತೈದ್ ಲಕ್ಷ ಜನ ಮಾತಾಡು ನಮ್ ಭಾಷಿ ಯಾವ್ ದೊಡ್
ಪ್ರಾದೇಶಿಕ ಭಾಷಿಗೂ ಕಮ್ಮಿ ಇಲ್ಲ ಎಂದು ಸಮ್ಮೇಳನಾಧ್ಯಕ್ಷರ ಮಾತುಗಳಲ್ಲಿ ತಿಳಿಸಿದರು.