ಲಾಯಿಲ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಲಾಯಿಲ ಮಹಿಳಾ ಬಿಲ್ಲವ ವೇದಿಕೆ ಲಾಯಿಲ ಮತ್ತು ಯುವ ಬಿಲ್ಲವ ವೇದಿಕೆ ಲಾಯಿಲ ಇವರ ಸಂಯುಕ್ತ ಆಶ್ರಯದಲ್ಲಿ ಕಂಡೊದ ಕಲೊಟ್ಟು ಬಿರುವೆರೆ ಗೊಬ್ಬು ಎಂಬ ಕೆಸರಿನ ಕ್ರೀಡಾಕೂಟವು ತಾರೀಕು 28. 9. 2025ನೇ ಆದಿತ್ಯವಾರ ಲಾಯಿಲ ಗ್ರಾಮದ ಹಂದೆವೂರು ಬೊಟ್ಟು ಎಂಬಲ್ಲಿ ನಡೆಯಿತು.
ಬೆಳಿಗ್ಗೆ ಕೈಪ್ಲೋಡಿಯ ಕೃಷ್ಣಪ್ಪ ಪೂಜಾರಿಯವರು ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ನಂತರ ಕಂಬಳದ ಕೋಣಗಳನ್ನು ಬ್ಯಾಂಡ್ ವಾಲಗದ ಮೂಲಕ ಗದ್ದೆಗೆ ಇಳಿಸಿ, ಉಳುಮೆ ಮಾಡಿ, ಕೋಳಿ ಅಂಕದ ಪ್ರಾತಕ್ಷಿಕೆ ನಡೆಸಲಾಯಿತು. ಹಿರಿಯರಾದ ದರ್ಖಾಸು ಸಂಜೀವ ಪೂಜಾರಿಯವರು ಗದ್ದೆಗೆ ಹಾಲು, ತುಪ್ಪ, ಎಳನೀರನ್ನು ಎರೆಯುವ ಮೂಲಕ ಕೆಸರಿನ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಮಧ್ಯಾಹ್ನ ಬಿ ಲಕ್ಷ್ಮಣ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಬೆಳ್ತಂಗಡಿ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ರಿ) ಇದರ ಅಧ್ಯಕ್ಷರಾದ ಜಯವಿಕ್ರಮ ಕಲ್ಲಾಪು, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಭಗೀರಥ ಜಿ., ಸುವರ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಸುವರ್ಣ, ಶ್ರೀಮತಿ ಸುಮತಿ ಪ್ರಮೋದ್, ಎಂ. ಕೆ. ಪ್ರಸಾದ್, ಗುರುರಾಜ್ ಗುರಿಪಳ್ಳ ಹಾಗೂ ಸಂಘದ ನಿರ್ದೇಶಕರು ಮತ್ತು ಗ್ರಾಮ ಪಂಚಾಯತ್ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಸಂತ್ ಸುವರ್ಣ ಲಾಯಿಲ, ಬಹುಮಾನ ವಿತರಕರಾಗಿ ಶೈಲೇಶ್ ಆರ್. ಜೆ. ಭಾಗವಹಿಸಿದ್ದರು. ಕಾರ್ಯದರ್ಶಿ ಸೌಮ್ಯ ಲಾಯಿಲ ಸ್ವಾಗತಿಸಿ, ಸ್ನೇಕ್ ಅಶೋಕ್ ವಂದಿಸಿದರು. ಜಯನಂದ ಅಂಕಾಜೆಯವರು ನಿರೂಪಿಸಿದರು.