ಉಡುಪಿ: ವಿಶ್ವಹಿಂದೂ ಪರಿಷದ್ ವತಿಯಿಂದ ಶಿವ ಪಂಚಾಕ್ಷರಿ ಜಪ ಸಂಕಲ್ಪ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಕೊನೆಯಾಗಲು ಪ್ರಾರ್ಥನೆ ಸಲ್ಲಿಸಿ ಅನಂತೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶಿವ ಪಂಚಾಕ್ಷರಿ ಜಪ ಸಂಕಲ್ಪ ನಡೆಸಲಾಯಿತು.
ಪರ್ಯಾಯ ಶ್ರೀ ಸುಗುಣೇಂದ್ರತಿರ್ಥ ಸ್ವಾಮೀಜಿ ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು. ಧರ್ಮಸ್ಥಳಕ್ಕೂ ಉಡುಪಿಯ ಅನಂತೇಶ್ವರಕ್ಕೂ ವಾದಿರಾಜ ಸಾರ್ವಭೌಮ ಯತಿಗಳಿಗೂ ಅವಿನಾಭಾವ ಸಂಬಂಧ ಇದೆ. ಕ್ಷೇತ್ರದ ಬಗ್ಗೆ ಅಪಚಾರ ಹಾಗೂ ಅಪಪ್ರಚಾರ ಖಂಡನೀಯ. ಆದಷ್ಟು ಬೇಗ ಎಲ್ಲ ವಿದ್ಯಮಾನಗಳು ತಾರ್ಕಿಕ ಅಂತ್ಯ ಕಾಣಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷದ್ ದಕ್ಷಿಣ ಪ್ರಾಂತ ಗೋರಕ್ಷಾ ಪ್ರಮುಖ್ ಸುನಿಲ್ ಕೆ.ಆರ್. ಹಾಗೂ ವಿಶ್ವಹಿಂದೂ ಪರಿಷದ್ ಜಿಲ್ಲಾ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.