ಲಿನಿಯಾ ಆಲ್ಬಾ

0
15

ಲಿನಿಯಾ ಆಲ್ಬಾ ಎನ್ನುವುದು ಬಾಯಿಯೊಳಗೆ ಕೆನ್ನೆಯ ಒಳಭಾಗದಲ್ಲಿ ಮೇಲಿನ ಮತ್ತು ಕೆಳಗಿನ ಹಲ್ಲಿನ ಪಂಕ್ತಿಗಳು ಕೂಡುವ ಜಾಗದಲ್ಲಿ ಕಂಡು ಬರುವ ಬಿಳಿಯ ಬಣ್ಣದ ನೇರವಾದ ಗೆರೆಯಾಗಿರುತ್ತದೆ. ಹೆಚ್ಚಾಗಿ ಕೆನ್ನೆಯ ಒಳಭಾಗ ನಸುಗುಲಾಬಿ ಅಥವಾ ಪಿಂಕ್ ಬಣ್ಣದಿಂದ ಕೂಡಿರುತ್ತದೆ. ಈ ನಸುಗುಲಾಬಿ ಬಣ್ಣದ ಕೆನ್ನೆಯ ಒಳಭಾಗದಲ್ಲಿ ನೆರವಾದ ಬಿಳಿ ಬಣ್ಣದ ನೇರವಾದ ಗೆರೆ ಕಂಡು ಬಂದಾಗ ಸಾಮಾನ್ಯವಾಗಿ ಹೆಚ್ಚಿನ ರೋಗಿಗಳು ಗಾಬರಿ ಪಡುತ್ತಾರೆ. ಬಾಯಿಯೊಳಗೆ ಬಿಳಿ ಅಥವಾ ಕೆಂಪು ಕಳೆಗಳು ಅಥವಾ ಮಚ್ಚೆಗಳು ಅಪಾಯಕಾರಿ ಎಂಬುದು ಹೆಚ್ಚಿನ ಜನರಿಗೆ ತಿಳಿದಿರುತ್ತದೆ. ಈ ರೀತಿಯಾಗಿ ಕಂಡು ಬರುವುದು ಕ್ಯಾನ್ಸರ್ ಪೂರ್ವ ಸ್ಥಿತಿ ಎಂದು ದಂತ ವೈದ್ಯರು ಮತ್ತು ಗೂಗಲ್ ಮುಖಾಂತರ ತಿಳಿದು ಅನಗತ್ಯ ಗಾಬರಿಯಾಗುತ್ತಾರೆ.

ಲಿನಿಯಾ ಆಲ್ಬಾ ಎನ್ನುವುದು ಮೇಲಿನ ಮತ್ತು ಕೆಳಗಿನ ದವಡೆಯ ಹಲ್ಲಿನ ಪಂಕ್ತಿಗಳು ಕೂಡುವ ಜಾಗದಲ್ಲಿ ಕೆನ್ನೆಯ ಒಳಭಾಗದಲ್ಲಿ ನೇರವಾಗಿ ಗೆರೆ ಹಾಕಿದಂತೆ ಕಂಡು ಬರುತ್ತದೆ. ಹಲ್ಲಿನ ಚೂಪಾದ ತುದಿಗಳಿಂದ ನಿರಂತರವಾಗಿ ಕೆನ್ನೆಯ ಒಳಭಾಗಕ್ಕೆ ಉಂಟಾಗುವ ಸಂಘರ್ಷದಿಂದ ಈ ರೀತಿಯ ಪರಿಸ್ಥಿತಿ ಉದ್ಭವಿಸುತ್ತದೆ. ಹೆಚ್ಚಾಗಿ ನೇರವಾಗಿ ಗೆರೆ ಎಳೆದಂತೆ ಇರುವ ಈ ಪರಿಸ್ಥಿತಿ, ಬಾಯಿಯ ಎರಡೂ ಬದಿಯಲ್ಲಿ ಕಂಡು ಬರುವ ಸಾಧ್ಯತೆ ಇರುತ್ತದೆ. 99 ಶೇಕಡಾ ಮಂದಿಯಲ್ಲಿ ಇದು ಬಿಳಿ ಬಣ್ಣದಲ್ಲಿ ಇರುತ್ತದೆ. ಇದರ ಬಣ್ಣ ಬದಲಾದಲ್ಲಿ ಅಥವಾ ಹುಣ್ಣು ಉಂಟಾದಲ್ಲಿ ತಕ್ಷಣವೇ ದಂತ ವೈದ್ಯರ ಸಲಹೆ ಅತೀ ಅಗತ್ಯ. ಲಿನಿಯಾ ಆಲ್ಬಾ ಎನ್ನುವುದು ಕ್ಯಾನ್ಸರ್ ಅಲ್ಲದ ಅತ್ಯಂತ ನಿರುಪದ್ರವಿ ಸ್ಥಿತಿಯಾಗಿದ್ದು, ಕೆನ್ನೆಯ ಒಳಭಾಗದಲ್ಲಿ ಕೆನ್ನೆಯ ಒಳಭಾಗದ ಹೊರಪದರವಾದ ಎಪಿಥೀಯಮ್ ದಪ್ಪವಾಗಿ ಕಂಡು ಬರುತ್ತದೆ. ಇದರಿಂದ ಯಾವುದೇ ರೀತಿಯಾಗಿ ಆರೋಗ್ಯ ಸಮಸ್ಯೆ ಇರುವುದಿಲ್ಲ. ಲ್ಯೂಕೋಪ್ಲೇಕಿಯಾ ಎಂಬ ಕ್ಯಾನ್ಸರ್ ಪೂರ್ವ ಸ್ಥಿತಿ ಕಾಯಿಲೆ ಕೂಡ ಬಿಳಿ ಬಣ್ಣವನ್ನು ಹೊಂದಿರುವುದರಿಂದ, ನಿಮಗೆ ಸಂಶಯವಿದ್ದಲ್ಲಿ ದಂತ ವೈದ್ಯರ ಬಳಿ ತೋರಿಸಿಕೊಂಡು ಲ್ಯೂಕೋಪ್ಲೇಕಿಯಾ ಅಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.

ಏನು ಮಾಡಬೇಕು?

  1. ದಂತ ವೈದ್ಯರ ಬಳಿ ತೋರಿಸಿಕೊಂಡು ಹಲ್ಲಿನ ಚೂಪಾದ ತುದಿಗಳನ್ನು ಟ್ರಿಮ್ ಮಾಡಿಸಿಕೊಳ್ಳಬೇಕು.
  2. ನಿರಂತರ ಘರ್ಷಣೆಯಿಂದ ಉಂಟಾದ ಬಿಳಿ ಪದರದ ಉರಿಯೂತವನ್ನು ನಿವಾರಿಸಲು ಉರಿಯೂತ ಶಮನಕಾರಿ ಮೌತ್ ವಾಶ್‍ಗಳನ್ನು ಬಳಸಬಹುದಾಗಿದೆ. ಉಗುರು ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿಕೊಂಡು ಬಾಯಿ ಮುಕ್ಕಳಿಸಿದಲ್ಲಿ ಈ ಉರಿಯೂತ ಶಮನವಾಗುತ್ತದೆ.
  3. ನೋವು ಮತ್ತು ಉರಿಯೂತ ಎರಡೂ ಇದ್ದಲ್ಲಿ ದಂತ ವೈದ್ಯರ ಬಳಿ ತೋರಿಸಿ ನೋವು ನಿವಾರಕ ಔಷದಿ ತೆಗೆದುಕೋಳ್ಳಬಹುದು.
  4. ಬಿಳಿ ಪದರ ಅಥವಾ ಬಿಳಿ ಗೆರೆಯಲ್ಲಿ ಕೆಂಪು ಕಲೆಗಳು ಕಂಡುಬಂದಲ್ಲಿ ಅಥವಾ ಹುಣ್ಣು ಉಂಟಾಗಿ ಜಗಿಯಲು ,ಅಗಿಯಲು ಮಾತನಾಡಲು ಸಮಸ್ಯೆ ಇದ್ದಲ್ಲಿ ದಂತ ವೈದ್ಯರ ಸಂದರ್ಶನ ಮತ್ತು ಸಲಹೆ ಅತೀ ಅಗತ್ಯ.

ಚಿಕಿತ್ಸೆ ಹೇಗೆ?

  1. ‘ಲಿನಿಯಾ ಆಲ್ಬಾ’ ಪರಿಸ್ಥಿತಿಗೆ ಯಾವುದೇ ಚಿಕಿತ್ಸೆ ಅಗತ್ಯವಿಲ್ಲ. ಈ ಬಿಳಿ ಗೆರೆ ಉಂಟಾಗಲು ಕಾರಣೀಭೂತವಾದ ಅಂಶವನ್ನು ಸರಿಪಡಿಸಿದಲ್ಲಿ ಈ ಲಿನಿಯಾ ಆಲ್ಬಾ ಆರು ತಿಂಗಳಲ್ಲಿ ತನ್ನಿಂತಾನೇ ಅಳಿಸಿ ಹೋಗುತ್ತದೆ.
  2. ಇನ್ನೂ ಕೆಲವು ರೋಗಿಗಳು ಈ ವಿಚಾರವನ್ನು ಅತಿಯಾಗಿ ಚಿಂತಿಸಿ ಕಾನ್ಸರ್ ಆಗಿರಬಹುದು ಎಂದು ಮಾನಸಿಕವಾಗಿ ಕೊರಗಿದಲ್ಲಿ ಲೇಸರ್ ಚಿಕಿತ್ಸೆ ಮುಖಾಂತರ ಈ ಬಿಳಿ ಗೆರೆಯನ್ನು ಚಿಕಿತ್ಸೆ ನೀಡಿ ಸರಿಪಡಿಸಬಹುದಾಗಿದೆ.
  3. ಪ್ಲಾಸೆಂಟ್ರಿಕ್ಸ್ ಎಂಬ ಔಷದಿ ಅಥವಾ ಹೈನಿಡೇಸ್ ಎಂಬ ಔಷದಿ ಅಥವಾ ಸ್ಟೀರಾಯ್ಡ್ ಔಷದಿಯನ್ನು ಈ ಬಿಳಿ ಭಾಗಕ್ಕೆ ನೀಡಿ ಚಿಕಿತ್ಸೆ ನೀಡುವ ಪ್ರಯತ್ನ ನಡೆದಿದೆ. ಆದರೆ ಇದಾವುದರ ಚಿಕಿತ್ಸೆ ಅಗತ್ಯವಿಲ್ಲ ಎಂದೂ ಅಧ್ಯಯನಗಳಿಂದ ತಿಳಿದು ಬಂದಿದೆ. ಈ ಬಿಳಿ ಗೆರೆ ಉಂಟಾಗಲು ಕಾರಣವಾದ ಅಂಶವನ್ನು ಸರಿಪಡಿಸಿದರೆ ಸಾಕು ಎಂದು ದಂತ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
  4. ಕೆಲವೊಂದು ರೋಗಿಗಳು ಈ ವಿಚಾರದ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಂಡು ಕ್ಯಾನ್ಸರ್ ಆಗಿದೆ ಎಂದು ಆಕಾಶ ತಲೆ ಮೆಲೆ ಬಿದ್ದಂತೆ ವರ್ತಿಸಿದಲ್ಲಿ, ಸರ್ಜರಿ ಮುಖಾಂತರ ಈ ಬಿಳಿ ಭಾಗದ ಎತ್ತರದ ಪದರವನ್ನು ತೆಗೆದು ಹೊಲಿಗೆ ಹಾಕಲಾಗುತ್ತದೆ. ಅದೇ ರೀತಿ ಮನೋವೈದ್ಯರ ಬಳಿ ಆಪ್ತ ಸಮಾಲೋಚನೆ ಮಾಡಿಸಲಾಗುತ್ತದೆ.
  5. ಸ್ಠೀರಾಯ್ಡು ಕ್ರೀಮ್‍ಗಳನ್ನು ಲೇಪನ ಮಾಡಲು ಸಾಧ್ಯವಿದೆ. ಉರಿಯೂತ ಇದ್ದಲ್ಲಿ ಸ್ಠೀರಾಯ್ಡು ಕ್ರೀಮ್ ಬಳಸಬಹುದಾಗಿದೆ.

ಕೊನೆಮಾತು

ಲಿನಿಯಾ ಆಲ್ಬಾ ಎನ್ನುವುದು ಅತೀ ಮೃದು ಸ್ವಭಾವದ, ಯಾವುದೇ ನೋವು, ತುರಿಕೆ ಅಥವಾ ಉರಿತ ಇಲ್ಲದೆ ಸ್ಥಿತಿಯಾಗಿರುತ್ತದೆ. ಕ್ಯಾನ್ಸರ್ ಅಂತೂ ಅಲ್ಲವೇ ಅಲ್ಲ ಎಂಬುದನ್ನು ಜನರು ಅರಿತುಕೊಳ್ಳಬೇಕು ಸಾಮಾನ್ಯವಾಗಿ ನೂರರಲ್ಲಿ, ನಲವತ್ತು ಶೇಕಡಾ ಮಂದಿ ಈ ರೀತಿಯ ‘ಲಿನಿಯಾ ಆಲ್ಬಾ’ ಪರಿಸ್ಥಿತಿಯನ್ನು ಜೀವಮಾನದಲ್ಲಿ ಒಮ್ಮೆಯಾದರೂ ಅನುಭವಿಸಿರುತ್ತಾರೆ. ಹೆಚ್ಚಿನ ಸಂಧರ್ಭಗಳಲ್ಲಿ ರೋಗಿಯ ಗಮನಕ್ಕೆ ಬರದೇ ಇರಲೂಬಹುದು. ಸಾಮಾನ್ಯವಾಗಿ ನೋವು ಇಲ್ಲದ ಕಾರಣ ಹೆಚ್ಚಿನ ರೋಗಿಗಳು ಈ ವಿಚಾರದ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಆದರೆ ಕೆಲವೊಮ್ಮೆ ಅತೀ ಸೂಕ್ಷ ಮನಸ್ಸಿನ ವ್ಯಕ್ತಿಗಳು, ಈ ಬಿಳಿಗೆರೆಯನ್ನು ಅತಿಯಾಗಿ ವೈಭವೀಕರಿಸಿ, ಗೂಗಲ್ ಮುಖಾಂತರ ಇಲ್ಲಸಲ್ಲದ ವಿಚಾರಗಳನ್ನು ತಲೆಗೆ ತುರುಕಿಸಿಕೊಂಡು ಅನಗತ್ಯವಾಗಿ ಚಿಂತಿಸಿ ದಂತ ವೈದ್ಯರ ಬಳಿ ಬಂದು ಚಿಕಿತ್ಸೆಗಾಗಿ ದಂಬಾಲು ಬೀಳುತ್ತಾರೆ. ಇಂಥಹಾ ಸಂದರ್ಭಗಳಲ್ಲಿ ದಂತ ವೈದ್ಯರು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಬಳಸಿ ರೋಗಿಯ ಸಂಶಯವನ್ನು ನಿವಾರಿಸಿ, ವೃತಿಯ್ತ ರಾಜಧರ್ಮವನ್ನು ಎತ್ತಿ ಹಿಡಿಯುವ ಅನಿವಾರ್ಯತೆ ಇದೆ. ಅದರಲ್ಲಿಯೇ ಸಮಾಜದ ಮತ್ತು ಮನುಕುಲದ ಒಳಿತು ಅಡಗಿದೆ.

ಡಾ| ಮುರಲೀ ಮೋಹನ್ ಚೂಂತಾರು
BDS, MDS, DNB, MBA,FPFA,
MOSRCR Ed (UK)
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು
9845135787
drmuraleemohan@gmail.com
www.surakshadental.com

LEAVE A REPLY

Please enter your comment!
Please enter your name here