ದ. ಕ. ಜಿಲ್ಲಾ ನ್ಯಾಯಾಲಯದಲ್ಲಿ ಲೋಕ್ ಅದಾಲತ್ : ನೂರಾರು ಪ್ರಕರಣಗಳ ಸೌಹಾರ್ದಯುತ ಇತ್ಯರ್ಥ

0
8

ವರದಿ : ಮಂದಾರ ರಾಜೇಶ್ ಭಟ್

ಮಂಗಳೂರು: ಸಾರ್ವಜನಿಕರಿಗೆ ತ್ವರಿತ ಮತ್ತು ಕಡಿಮೆ ವೆಚ್ಚದಲ್ಲಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಲೋಕ ಅದಾಲತ್’ ಅಭಿಯಾನವು ಅತ್ಯಂತ ಯಶಸ್ವಿಯಾಗಿ ಜರುಗಿದೆ.

ಸಂಧಾನದ ಮೂಲಕ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ನೂರಾರು ಪ್ರಕರಣ ಇಲ್ಲಿ ಸುಖಾಂತ್ಯ ಪಡೆದಿದೆ .

ವಿವಿಧ ವ್ಯಾಜ್ಯಗಳ ಇತ್ಯರ್ಥ

ಹಣಕಾಸಿನ ವಿವಾದಗಳು, ಸಿವಿಲ್ ವ್ಯಾಜ್ಯಗಳು ಹಾಗೂ ಮೋಟಾರು ವಾಹನ ಅಪಘಾತ, ಕೌಟುಂಬಿಕ ವ್ಯಾಜ್ಯಗಳು, ಪರಿಹಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ಇತ್ಯರ್ಥಪಡಿಸಲಾಯಿತು.

​ಗಣ್ಯರ ಮಾರ್ಗದರ್ಶನ

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಬಸವರಾಜ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (DLSA) ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ನ್ಯಾಯಾಧೀಶರಾದ ಶ್ರೀಮತಿ ಜೈ ಬುನ್ನಿಸ ಅವರ ಮಾರ್ಗದರ್ಶನದಲ್ಲಿ ಲೋಕ್ ಅದಾಲತ್ ನಡೆಯಿತು.

​ಸಕ್ರಿಯ ಭಾಗವಹಿಸುವಿಕೆ

ಈ ಅದಾಲತ್‌ನಲ್ಲಿ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ವಾದಿ-ಪ್ರತಿವಾದಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ನ್ಯಾಯಾಲಯದ ಆವರಣದಲ್ಲಿ ಹಾರ ಬದಲಿಸಿದ ದಂಪತಿ!

ಈ ಬಾರಿಯ ಲೋಕ ಅದಾಲತ್ ಒಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಕೌಟುಂಬಿಕ ನ್ಯಾಯಾಲಯದಲ್ಲಿ ಮನಸ್ತಾಪದಿಂದ ದೂರಾಗಿದ್ದ ದಂಪತಿಗಳು, ನ್ಯಾಯಾಧೀಶರ ಮತ್ತು ಸಂಧಾನಕಾರರ ಸತತ ಪ್ರಯತ್ನದ ಫಲವಾಗಿ ಮತ್ತೆ ಒಂದಾಗಲು ಸಮ್ಮತಿಸಿದರು.

ನ್ಯಾಯಾಧೀಶರ ಸಮ್ಮುಖದಲ್ಲೇ ಪತಿ-ಪತ್ನಿ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ತಮ್ಮ ಹಳೆಯ ಕಹಿ ಘಟನೆಗಳನ್ನು ಮರೆತು, ಮತ್ತೆ ಒಂದಾಗಿ ಜೀವನ ನಡೆಸಲು ನಿರ್ಧರಿಸಿದರು. ನ್ಯಾಯಾಲಯದ ಕಟಕಟೆಯಲ್ಲಿದ್ದ ದಂಪತಿಗಳು ಹಾರ ಬದಲಿಸಿ ಸಕ್ಕರೆ ಹಂಚಿ ನಗುನಗುತ ಮನೆಗೆ ತೆರಳಿದ್ದು ಅದಾಲತ್‌ನ ಸೌಹಾರ್ದತೆಗೆ ಹಿಡಿದ ಕೈಗನ್ನಡಿಯಾಗಿತ್ತು.

​ಸಂಧಾನದ ಮಹತ್ವ

​ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದರಿಂದ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ. ಕಕ್ಷಿದಾರರು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಮಾಹಿತಿ ಒದಗಿಸಲಾಯಿತು.

LEAVE A REPLY

Please enter your comment!
Please enter your name here