ಉಡುಪಿ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತಿ ದೊಡ್ಡ ಪಿಡುಗಾಗಿರುವ ಭ್ರಷ್ಠಾಚಾರವನ್ನು ಬುಡ ಸಮೇತ ನಿರ್ಮೂಲನೆ ಮಾಡಲು ಲೋಕಾಯುಕ್ತ ಸಂಸ್ಥೆ ಸದಾ ಬದ್ಧವಾಗಿದ್ದು, ಎಲ್ಲಾ ಅಧಿಕಾರಿಗಳು ಕರ್ತವ್ಯವೇ ದೇವರು ಎಂಬ ಸೇವಾ ಮನೋಭಾವದೊಂದಿಗೆ ಭ್ರಷ್ಠಾಚಾರವೆಂಬ ಭೂತವನ್ನು ನಿರ್ನಾಮ ಮಾಡಲು ಸಂಕಲ್ಪ ಮಾಡಬೇಕು ಎಂದು ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಶ್ರೀಯುತ ಬಿ.ವೀರಪ್ಪ ಹೇಳಿದರು.
ಅವರು ಇಂದು ನಗರದ ಮಣಿಪಾಲದಲ್ಲಿಯ ‘ರಜತಾದ್ರಿ’ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿದಂತೆ ಬಾಕಿ ಇರುವ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದಿದೆ. ಇತ್ತೀಚೆಗಷ್ಟೇ 77 ನೇ ಗಣರಾಜ್ಯೋತ್ಸವವನ್ನು ಆಚರಿಸಿ, ಸಂಭ್ರಮಿಸಿದ್ದೇವೆ. ಪ್ರಪಂಚದಲ್ಲಿಯೇ ನಮ್ಮ ಭಾರತ ದೇಶ 4 ನೇ ಅಗ್ರಗಣ್ಯ ಸ್ಥಾನದಲ್ಲಿದೆ. ಹೀಗಿದ್ದರೂ ಸಹ ದೇಶದ ನ್ಯಾಯದಾನ ವ್ಯವಸ್ಥೆ ಹಾಗೂ ಲೋಕಾಯುಕ್ತ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಆಗುತ್ತಿಲ್ಲ ಎಂದ ಅವರು, ನಮ್ಮ ಪೂರ್ವಜರು ದೀರ್ಘ ಹೋರಾಟ ಮಾಡಿ ಸ್ವಾತಂತ್ರ್ಯವನ್ನು ಒದಗಿಸಿ ಕೊಟ್ಟಿದ್ದಾರೆ. ಅವರು ಸುಮ್ಮನಿದ್ದಿದ್ದರೆ ಇಂದು ನಾವುಗಳು ಬ್ರಿಟಿಷರ ದಬ್ಬಾಳಿಕೆಗೆ ಒಳಗಾಗಿರುತ್ತಿದ್ದೆವು. ಜನಸಾಮಾನ್ಯರಾದ ತಮ್ಮೆಲ್ಲರಿಗೂ ನೀಡಲಾದ ಶಾಸನಬದ್ಧ ಹಕ್ಕು ಮತ್ತು ಕರ್ತವ್ಯಗಳನ್ನು ಧೈರ್ಯದಿಂದ ಕೇಳಿ ಪಡೆದುಕೊಳ್ಳಬೇಕು. ಒಂದೊಮ್ಮೆ ನ್ಯಾಯ ಪಡೆಯಲು ಹೋರಾಟ ಮಾಡದಿದ್ದರೆ ಅದು ಅಕ್ಷಮ್ಯ ಅಪರಾಧವಾದಂತೆ ಎಂದರು.
ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರಿಗೆ ನಿಯಮಾನುಸಾರ ಸಕಾಲದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಪದೇ ಪದೇ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು. ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಅಧಿಕಾರಿಗಳೊಂದಿಗೆ ಸಾರ್ವಜನಿಕರು ಕೂಡ ಬದಲಾಗಬೇಕಾದ ಅನಿವಾರ್ಯತೆ ಇದೆ ಎಂದ ಅವರು, ಚುನಾವಣಾ ಸಮಯದಲ್ಲಿ ಜನರು ಯಾವುದೇ ಆಮಿಷಗಳಿಗೆ ಒಳಗಾಗದೇ ಮತ ಚಲಾವಣೆ ಮಾಡಬೇಕು ಎಂದರು.
ಜಿಲ್ಲೆಯು ಶೈಕ್ಷಣಿಕ ವ್ಯವಸ್ಥೆಯಲ್ಲಿ ಮುಂದೆ ಇದೆ. ಜಿಲ್ಲೆಯ ಅಧಿಕಾರಿಗಳು ಯಾವುದೇ ಕಪ್ಪುಚುಕ್ಕೆ ಇಲ್ಲದೆ ಕಾಯ, ವಾಚ, ಮನಸ್ಸಿನಿಂದ ಪ್ರಾಮಾಣಿಕ ಸೇವೆಯನ್ನು ಸಾರ್ವಜನಿಕರಿಗೆ ನೀಡುವಂತಾಗಬೇಕು. ಆಗ ಮಾತ್ರ ಕೆಲಸದಲ್ಲಿ ಸಾರ್ಥಕತೆ ಹೊಂದಲು ಸಾಧ್ಯ. ಸಾರ್ವಜನಿಕ ವಲಯದಲ್ಲಿ ಭ್ರಷ್ಠಾಚಾರ ಎಂಬ ಪದ ಅಂತ್ಯ ಕಾಣಬೇಕು ಎಂದರು.
ಈಗಾಗಲೇ ರಾಜ್ಯದ ಪ್ರತಿಯೊಂದೂ ಜಿಲ್ಲೆಗೂ ಭೇಟಿ ನೀಡಿ, ಅಲ್ಲಿರುವ ಲೋಕಾಯುಕ್ತ ಸಂಸ್ಥೆಗೆ ನೀಡಲಾಗಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದ್ದು, ಈ ಜಿಲ್ಲೆಯ 150 ಬಾಕಿ ಪ್ರಕರಣಗಳನ್ನು ಇಂದು ವಿಚಾರಣೆ ನಡೆಸಲಾಗುತ್ತಿದೆ. ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಇವುಗಳನ್ನು ಪೂರ್ಣಗೊಳಿಸಲು ಸಹಕಾರ ನೀಡಬೇಕು. ಒಂದೊಮ್ಮೆ ಸುಳ್ಳು ಪ್ರಕರಣಗಳನ್ನು ಸಾರ್ವಜನಿಕರು ನೀಡಿದ್ದಲ್ಲಿ ಅಂತಹವರ ಮೇಲೆಯೂ ಸಹ ಪ್ರಕರಣ ದಾಖಲಿಸಿ, ಮೂರು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀಯುತ ಕಿರಣ್ ಗಂಗಣ್ಣನವರ್ ಮಾತನಾಡಿ, ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಅಧಿಕಾರಿಗಳು ಸಂಭವಿಸಬಹುದಾದ ಎಲ್ಲಾ ನ್ಯೂನ್ಯತೆಗಳನ್ನು ಮೀರಿ ಕಾರ್ಯತತ್ಪರತೆಯಲ್ಲಿ ಹೊಸ ದೃಷ್ಠಿಕೋನವನ್ನು ಅಳವಡಿಸಿಕೊಂಡು ಕೆಲಸ ನಿರ್ವಹಿಸಬೇಕು. ಲೋಕದ ಹಿತದೃಷ್ಠಿಯಲ್ಲಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟು, ಮಾನ್ಯ ಲೋಕಾಯುಕ್ತ ನ್ಯಾಯಮೂರ್ತಿಗಳ ಮಾರ್ಗದರ್ಶನದಲ್ಲಿ ಯಶಸ್ಸು ಕಾಣಬೇಕು ಎಂದ ಅವರು, ಅಧಿಕಾರಿಗಳಿಗೆ ಈವರೆಗೂ ತಮ್ಮ ವಿರುದ್ಧ ಕೇಳಿ ಬಂದ ದೂರುಗಳು ಹಾಗೂ ಪತ್ರ ಮುಖೇನ ಬರುವ ಅಸಮಾನತೆಯ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಸಭೆಯು ಉತ್ತಮ ಮಾರ್ಗವಾಗಲಿದೆ ಎಂದರು
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ರವರು ಸ್ವಾಗತ ಭಾಷಣ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಉಡುಪಿ ಜಿಲ್ಲೆಯು ಸಾರ್ವಜನಿಕರ ಅರ್ಜಿಗಳಿಗೆ ನಿಗಧಿತ ಕಾಲಾವಧಿಯಲ್ಲಿ ಇತ್ಯರ್ಥಪಡಿಸುವ ಕಾರ್ಯದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಶಿಕ್ಷಣದಲ್ಲಿ ಎರಡನೇ ಸ್ಥಾನ ಪಡೆದಿದೆ. ಜಿಲ್ಲೆಯ ನ್ಯಾಯಾಲಯದಲ್ಲಿನ ಪ್ರಕರಣಗಳೂ ಸಹ ಇತರೆ ಜಿಲ್ಲೆಗಳಿಗೆ ಹೋಲಿಸಿದ್ದಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿ ಇದೆ ಎಂದ ಅವರು, ಜನರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಭೇಟಿ ನೀಡಲು ಬಂದಾಗ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೆಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ಉಪ ನಿಬಂಧಕರು ವಿಚಾರಣೆ – 1 ಶ್ರೀಯುತ ಅರವಿಂದ್ ಎನ್.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಯುತ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಯುತ ಹರಿರಾಮ್ ಶಂಕರ್, ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಶ್ರೀಯುತ ಬಿ ಪಿ ದಿನೇಶ್ ಕುಮಾರ್ , ಡಿ.ಎಫ್.ಓ ಶ್ರೀಯುತ ರುಥ್ರೇನ್ ಪಿ, ವೈಲ್ಡ್ ಲೈಫ್ ಡಿ.ಎಫ್.ಓ ಶ್ರೀಯುತ ಶಿವರಾಮ್ ಎಂ ಬಾಬು, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ, ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀಯುತ ಮನು ಪಟೇಲ್ ಬಿ.ವೈ ವಂದಿಸಿದರು.
ಬಾಕಿ ಇರುವ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ಬನ್ನಂಜೆ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ, ರಾಜ್ಯ ಮಹಿಳಾ ನಿಲಯದಲ್ಲಿನ ಅನಾಥರಿಗೆ ಮೂಲಭೂತ ಸೌಕರ್ಯ ಮತ್ತು ಅವರು ತಯಾರಿಸುವ ಉತ್ಪನ್ನಗಳ ಬೆಲೆಯ ವ್ಯತ್ಯಯ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಕಚೇರಿಯ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳು, ಚಿತ್ರಪಾಡಿ ಶಾಲೆಯ ಅಡುಗೆ ಕೋಣೆ ಹಾಗೂ ಶೌಚಾಲಯಗಳ ನ್ಯೂನ್ಯತೆಗಳು ಕಂಡು ಬಂದ ಹಿನ್ನೆಲೆ, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡ ದೂರುಗಳ ವಿಚಾರಣೆ ನಡೆಸಿ, ಅವುಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಿರುವ ಬಗ್ಗೆ ಲೋಕಾಯುಕ್ತ ಅಧೀಕ್ಷಕರ ವರದಿಯನ್ನಾಧರಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಯಿತು.
ಪೊಲೀಸ್ ಮಿರರ್ ವಾರಪತ್ರಿಕೆಯಲ್ಲಿ ಆರ್.ಟಿ.ಓ ಮತ್ತು ಉಪನೋಂದಣಾಧಿಕಾರಿಗಳ ವಿರುದ್ಧ ಭ್ರಷ್ಠಾಚಾರದ ಕುರಿತು ದೂರು, ಹಿರಿಯ ಉಪನೋಂದಣಾಧಿಕಾರಿ ಮತ್ತು ವಿವಾಹ ನೋಂದಣಾಧಿಕಾರಿಯವರ ಭ್ರಷ್ಠಾಚಾರ ಕುರಿತು ನೀಡಿದ ದೂರುದಾರರು ಹಾಜರಿರದ ಕಾರಣ ವಿಚಾರಣೆಯನ್ನು ಮುಂದೂಡಲಾಯಿತು.
ಜಿಲ್ಲೆಯ ನಿವೃತ್ತ ಯೋಧರಿಗೆ, ಹುತಾತ್ಮ ಯೋಧರ ಅವಲಂಬಿತರಿಗೆ ಹಾಗೂ ಸ್ವಾತಂತ್ರ್ಯ್ ಹೋರಾಟಗಾರರ ಅವಲಂಭಿತರಿಗೆ ದೊರೆಯಬೇಕಾದ ನಿವೇಶನ ನಿಗಧಿತ ಸಮಯದಲ್ಲಿ ನೀಡದಿರುವ ಬಗ್ಗೆ ದೂರುಗಳನ್ನು ಪರಿಶೀಲಿಸಿ, ವಿಳಂಬವಿಲ್ಲದೇ ನಿಯಮಾನುಸಾರ ನಿವೇಶನ ನೀಡಬೇಕೆಂದು ಉಪ ವಿಭಾಗಾಧಿಕಾರಿಗಳಿಗೆ ಮಾನ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಶ್ರೀಯುತ ಬಿ.ವೀರಪ್ಪ ಸೂಚಿಸಿದರು

