ವರದಿ : ಮಂದಾರ ರಾಜೇಶ್ ಭಟ್
ಮೂಡುಬಿದಿರೆ: ತುಳುನಾಡಿನ ನಶಿಸಿ ಹೋಗುತ್ತಿರುವ ದೇಶೀಯ ತಳಿಯ ಮರ-ಗಿಡಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಹಸಿರು ಪರಂಪರೆಯನ್ನು ಹಸ್ತಾಂತರಿಸುವ ಉದ್ದೇಶದಿಂದ ತುಳುವರ್ಲ್ಡ್ ಫೌಂಡೇಶನ್ ಆಶ್ರಯದಲ್ಲಿ ಮಹತ್ವದ “ಬಲೇ ಬನ ಬುಳೆಪಾಗ” ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ.
ಈ ಯೋಜನೆಯ ಅಂಗವಾಗಿ ಮಂಗಳೂರಿನಿಂದ ಮೂಡುಬಿದಿರೆಯವರೆಗೆ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಮರಗಳನ್ನು ಬೆಳೆಸುವ ‘ಮಹಾವೀರ ಸಾಲುಮರ ಯೋಜನೆ’ ಜಾರಿಗೆ ಬರಲಿದ್ದು, ಇದರ ಪೂರ್ವಭಾವಿ ಸಮಾಲೋಚನಾ ಸಭೆಯು ಇದೇ ಬರುವ ಜನವರಿ 28ರಂದು ನಡೆಯಲಿದೆ.
ಮೂಡುಬಿದಿರೆ ಜೈನ ಮಠದ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಶುಭಾಶೀರ್ವಾದದೊಂದಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಗ್ಲೋಬಲ್ ಗ್ರೀನ್ ಫೌಂಡೇಶನ್, ತುಳುವ ಮಹಾಸಭೆ ಇಂಟರ್ನ್ಯಾಷನಲ್ (ಮಂಗಳೂರು ಮತ್ತು ಮೂಡುಬಿದಿರೆ) ಇವರ ಸಹಯೋಗದೊಂದಿಗೆ, ಪರಿಸರ ಪ್ರೇಮಿ ಶ್ರೀ ಮಾಧವ ಉಳ್ಳಾಲ ಅವರ ನೇತೃತ್ವದಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದೆ.
ಯೋಜನೆಯ ರೂಪುರೇಷೆ ಹಾಗೂ ಮುಂದಿನ ಕಾರ್ಯಪಥದ ಬಗ್ಗೆ ಚರ್ಚಿಸಲು ಹಮ್ಮಿಕೊಳ್ಳಲಾಗಿರುವ ಈ ಸಭೆ ದಿನಾಂಕ: ಜನವರಿ 28 , ಸಮಯ ಬೆಳಿಗ್ಗೆ 10:30 ಗಂಟೆಗೆ, ಜೈನಮಠ, ಮೂಡುಬಿದಿರೆ ಇಲ್ಲಿ ನಡೆಯಲಿದೆ.
ತುಳುನಾಡಿನ ಸ್ಥಳೀಯ ಹಾಗೂ ಅಪರೂಪದ ಮರ-ಗಿಡಗಳನ್ನು ಗುರುತಿಸಿ ಬೆಳೆಸುವುದು.
ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯನ್ನು ಹಸಿರು ಕಾರಿಡಾರ್ ಆಗಿ ಪರಿವರ್ತಿಸುವುದು.
ಪರಿಸರ ಸಂರಕ್ಷಣೆಯ ಬಗ್ಗೆ ಯುವಜನರಲ್ಲಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.
”ತುಳುನಾಡನ್ನು ಹಸಿರಿನಿಂದ ತುಂಬುವ ಈ ಪವಿತ್ರ ಸಂಕಲ್ಪದಲ್ಲಿ ಪರಿಸರ ಪ್ರೇಮಿಗಳು, ಸಾಮಾಜಿಕ ಕಾರ್ಯಕರ್ತರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಶಿಕ್ಷಣ ತಜ್ಞರು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ-ಸಹಕಾರ ನೀಡಬೇಕು” ಎಂದು ತುಳುವರ್ಲ್ಡ್ ಫೌಂಡೇಶನ್, ತುಳುವ ಮಹಾಸಭೆ ಮತ್ತು ಗ್ಲೋಬಲ್ ಗ್ರೀನ್ ಫೌಂಡೇಶನ್ ಹರಿಪ್ರಸಾದ್ ರೈ, ರಾಜೇಶ ಆಳ್ವಾ ಬದಿಯಡ್ಕ, ಪ್ರಮೋದ್ ಸಪ್ರೆ ಹಾಗೂ ಇತರ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

