ಮಂಗಳೂರು: ಪ್ರತಿಷ್ಠಿತ ಸ್ವಾಯತ್ತ ವಿಶ್ವವಿದ್ಯಾಲಯ ಹಾಗು ಭಾರತದ ಪ್ರಮುಖ ಸಂಶೋಧನಾ-ಕೇಂದ್ರಿತ ಬಹು-ಶಿಸ್ತಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮೇ 24 ರಂದು ಮಂಗಳೂರಿನಲ್ಲಿ ತನ್ನ 32 ನೇ ಘಟಿಕೋತ್ಸವ ಆಯೋಜಿಸಿತ್ತು. ಈ ಸಮಾರಂಭವು ಪದವೀಧರರು, ಅಧ್ಯಾಪಕರು, ಗಣ್ಯರು ಮತ್ತು ಅತಿಥಿಗಳ ಸಮ್ಮುಖದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಸಂಭ್ರಮಿಸಿತು.
ಈ ಘಟಿಕೋತ್ಸವದಲ್ಲಿ, 766 ಪದವಿ ವಿದ್ಯಾರ್ಥಿಗಳು, 440 ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು 161 ಪಿಎಚ್‌ಡಿ ಪಡೆದವರು ಸೇರಿದಂತೆ 1,367 ವಿದ್ಯಾರ್ಥಿಗಳು ಪದವಿ ಪಡೆದರು. 616 ವಿದ್ಯಾರ್ಥಿಗಳು ಈ ಸಮಾರಂಭಕ್ಕೆ ಸಾಕ್ಷಿಯಾಗಿ, ತಮ್ಮ ಶೈಕಣಿಕ ಮತ್ತು ವೃತ್ತಿ ಜೀವನದ ಮೈಲಿಗಲ್ಲನ್ನು ಸಂಭ್ರಮಿಸಿದರು. ಪ್ರತಿಷ್ಠಿತ ಡಾ. ಟಿಎಂಎ ಪೈ ಚಿನ್ನದ ಪದಕವನ್ನು ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ-ಮಣಿಪಾಲ) ಎಂಬಿಬಿಎಸ್ ವಿದ್ಯಾರ್ಥಿನಿ ಇಶಾ ತ್ರಿಪಾಠಿ, ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ -ಮಂಗಳೂರು) ಎಂಬಿಬಿಎಸ್ ವಿದ್ಯಾರ್ಥಿನಿ ಆರ್. ಪೃಥ್ವಿ, ಮಣಿಪಾಲ ಕ್ಯಾಂಪಸ್ಸಿನ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ (ಎಂಕಾಡ್ಸ್ -ಮಣಿಪಾಲ) ಬಿಡಿಎಸ್ ವಿದ್ಯಾರ್ಥಿನಿ ಚಾರ್ವಿ ಬನ್ಸಾಲ್ ಮತ್ತು ಮಂಗಳೂರು ಕ್ಯಾಂಪಸ್ಸಿನ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ (ಎಂಕಾಡ್ಸ್ -ಮಂಗಳೂರು) ಅನೌಷ್ಕಾ ಅವಿ, ಅವರಿಗೆ ಪ್ರದಾನ ಮಾಡಲಾಯಿತು.
ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯ (NBEMS) ಅಧ್ಯಕ್ಷರಾದ ಡಾ. ಅಭಿಜಾತ್ ಸೇಠ್ ಅವರು ಸಮಾರಂಭದ ಗೌರವಾನ್ವಿತ ಮುಖ್ಯ ಅತಿಥಿಯಾಗಿ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಡಾ. ಅಭಿಜಾತ್ ಸೇಠ್ ಅವರು ಮಾತನಾಡಿ, ‘ಹಿಂದೆಂದೂ ಕಂಡಿರದಂತಹ ತಾಂತ್ರಿಕ ಪ್ರಗತಿ, ಪ್ರಾಕೃತಿಕ ಸವಾಲುಗಳು ಮತ್ತು ಸಾಮಾಜಿಕ-ಆರ್ಥಿಕ ಬದಲಾವಣೆಗಳನ್ನು ನಮ್ಮ ಸಮಾಜ ಈಗ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಕೇವಲ ವಿದ್ಯಾವಂತರಷ್ಟೇ ಅಲ್ಲದೆ, ನೈತಿಕತೆಯನ್ನು ಬಲವಾಗಿ ಎತ್ತಿಹಿಡಿಯುವವರ ಅಗತ್ಯವಿದೆ. ಅರ್ಥಪೂರ್ಣ ಪ್ರಗತಿಗೆ ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆಯ ಸಂಯೋಜನೆ ಕಾರಣ.’
ವೈದ್ಯಕೀಯ ಶಿಕ್ಷಣದಲ್ಲಿ ಸಂವಹನ ಮತ್ತು ಸಂಶೋಧನೆಯ ಮಹತ್ವದ ಬಗ್ಗೆ ಮಾತನಾಡಿದ ಅವರು, ‘ಪರಿಣಾಮಕಾರಿ ಸಂವಹನ ಮತ್ತು ಕ್ಲಿನಿಕಲ್ ಸಂಶೋಧನೆಯಲ್ಲಿ ಬಲವಾದ ಅಡಿಪಾಯ ಹೊಂದುವುದು ಭವಿಷ್ಯದ ಆರೋಗ್ಯ ವೃತ್ತಿಪರರಿಗೆ ಅಗತ್ಯವಾದ ಕೌಶಲ್ಯಗಳಾಗಿವೆ ಎನ್ನುವುದನ್ನು ನಾವು ನೀತಿ ನಿರೂಪಣೆಯ ಉನ್ನತ ಮಟ್ಟದಲ್ಲಿ ಗುರುತಿಸುತ್ತೇವೆ. ನಮ್ಮ ಪದವೀಧರರು ಆಧುನಿಕ ಆರೋಗ್ಯ ಸಂಕೀರ್ಣ ಬೇಡಿಕೆಗಳನ್ನು ಪೂರೈಸಲು ಸಜ್ಜಾಗಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಈ ಶಿಸ್ತನ್ನು ವೈದ್ಯಕೀಯ ತರಬೇತಿಯ ಆರಂಭಿಕ ಹಂತಗಳಲ್ಲಿ ಬೆಳೆಸಬೇಕು’ ಎಂದರು.
‘ಮಾಹೆಯಂತಹ ಸಂಸ್ಥೆಗಳು, ದೂರದೃಷ್ಟಿ ಮತ್ತು ಸಮಗ್ರತೆಯೊಂದಿಗೆ ಸಂಕೀರ್ಣತೆಯನ್ನು ನಿಭಾಯಿಸಬಲ್ಲ ನಾಯಕರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನೀವು ಇಲ್ಲಿ ಪಡೆದ ಶಿಕ್ಷಣವು ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ನಿಮ್ಮನ್ನು ಸಜ್ಜುಗೊಳಿಸಿದೆ. ನಿಮ್ಮ ಪ್ರಯಾಣವು ನಿಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ ಮಾಹೆ ಪ್ರತಿಪಾದಿಸುವ ಶ್ರೇಷ್ಠತೆ, ನಾವೀನ್ಯತೆ ಮತ್ತು ಸೇವೆಯ ಪರಂಪರೆಯನ್ನು ನೀವೆಲ್ಲ ಮುಂದುವರಿಸಿ” ಎಂದು ಕಿವಿಮಾತು ಹೇಳಿದರು.
“ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿಯ (NBEMS) ಪರವಾಗಿ, NBEMSಗಾಗಿ ‘ಅತ್ಯುತ್ತಮ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ’ ಮಾಡಿದ ಮಾಹೆ ಅಧ್ಯಾಪಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. NBEMS ನೊಂದಿಗೆ ಇನ್ನೂ ಹೆಚ್ಚಿನ ಸಹಯೋಗಗಳನ್ನು ಹೊಂದಲು ವಿಶ್ವವಿದ್ಯಾಲಯವನ್ನು ಕೋರುತ್ತೇನೆ. ಈ ಮೂಲಕ ನಾವು ಒಟ್ಟಾಗಿ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯನ್ನು ಮತ್ತಷ್ಟು ಎತ್ತರಕ್ಕೆ ಕರೆದೊಯ್ಯಬಹುದು” ಎಂದು ತಿಳಿಸಿದರು.
ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು ಮಾತನಾಡಿ, ಮಾಹೆಯಲ್ಲಿ ನಾವು ವಿದ್ಯಾರ್ಥಿಗಳನ್ನು ಕೇವಲ ವೃತ್ತಿಜೀವನಕ್ಕೆ ಮಾತ್ರ ಸಿದ್ಧಪಡಿಸುವುದಿಲ್ಲ, ಭವಿಷ್ಯವನ್ನು ರೂಪಿಸಲೂ ಅವರನ್ನು ಸಜ್ಜುಗೊಳಿಸುತ್ತೇವೆ. ನಾಳಿನ ಸವಾಲುಗಳನ್ನು ಸ್ವೀಕರಿಸಲು ಈಗ ಸಿದ್ಧರಾಗಿರುವ ಈ ಯುವ ಮನಸ್ಸುಗಳನ್ನು ಪೋಷಿಸಲು ನಮಗೆ ತುಂಬಾ ಹೆಮ್ಮೆಯಿದೆ. ಈ ಪದವೀಧರರು ಮುಂದಿನ ಪೀಳಿಗೆಯ ಸಂಶೋಧಕರು, ವೈದ್ಯರು, ಚಿಂತಕರು ಮತ್ತು ಬದಲಾವಣೆ ಹರಿಕಾರರನ್ನು ಪ್ರತಿನಿಧಿಸುತ್ತಾರೆ. ಅವರ ಸಾಧನೆಗಳು ಮಾಹೆ ಪ್ರತಿನಿಧಿಸುವ ಮೌಲ್ಯಗಳು ಮತ್ತು ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತವೆ’ ಎಂದರು.
ಮಾಹೆ ಉಪ ಕುಲಪತಿ ಲೆ. ಜ. (ಡಾ) ಎಂ.ಡಿ. ವೆಂಕಟೇಶ್ ವಿಎಸ್ಎಂ (ನಿ) ಅವರು ಮಾತನಾಡಿ, ಮಾಹೆ ಯಾವಾಗಲೂ ಸಂಪ್ರದಾಯ ಮತ್ತು ಪರಿವರ್ತನೆಯ ಮಧ್ಯದಲ್ಲಿರುತ್ತದೆ. ಅಲ್ಲಿ ಶೈಕ್ಷಣಿಕ ಕಠಿಣತೆ ಜಾಗತಿಕ ಪ್ರಸ್ತುತತೆಯನ್ನು ಸಂಧಿಸುತ್ತದೆ. ನಾವು ವಿದ್ಯಾರ್ಥಿಗಳನ್ನು ವಿಮರ್ಶಾತ್ಮಕವಾಗಿ ಯೋಚಿಸಲು, ವಿವಿಧ ಸಂಸ್ಕೃತಿಗಳೊಂದಿಗೆ ಸಾಮರಸ್ಯ ಮತ್ತು ಅರ್ಥಪೂರ್ಣ ಸಂಶೋಧನೆ ಕೈಗೊಳ್ಳಲು ಸಬಲಗೊಳಿಸುತ್ತೇವೆ. ನಾವು ಪ್ರಭಾವ ಬೀರುವ ವಿಶ್ವವಿದ್ಯಾಲಯವಾಗಿ ಬೆಳೆಯುತ್ತಿರುತ್ತೇವೆ. ಸಮಾಜದ ಭವಿಷ್ಯದ ಅಗತ್ಯಗಳಿಗೆ ಹೊಂದಿಕೊಳ್ಳುವ, ಮುನ್ನಡೆಸುವ ಮತ್ತು ನಿರೀಕ್ಷಿಸುವ ಸಾಮರ್ಥ್ಯದಲ್ಲಿ ನಮ್ಮ ಬಲವಿದೆ. ಈ ಬಾರಿ ಪದವಿ ಪಡೆಯುವ ಬ್ಯಾಚ್ ಆ ಮನೋಭಾವವನ್ನು ಸಾಕಾರಗೊಳಿಸಿದ್ದು, ಬುದ್ದಿವಂತಿಕೆ ಮತ್ತು ಸಹಾನುಭೂತಿ ಎರಡರಿಂದಲೂ ಕೊಡುಗೆ ನೀಡಲು ಸಿದ್ಧವಾಗಿದೆ. ಅವರ ಪ್ರಯಾಣದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಮತ್ತು ಅವರು ಸಮಾಜದಲ್ಲಿ ಯಾವ ಛಾಪು ಮೂಡಿಸುತ್ತಾರೆ ಎಂಬುದನ್ನು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದರು.
ಮಾಹೆ ಮಂಗಳೂರು ಸಹ ಉಪಕುಲಪತಿ ಡಾ. ದಿಲೀಪ್ ಜಿ. ನಾಯ್ಕ್, ‘ಪದವಿಗಳು ಮತ್ತು ಪುರಸ್ಕಾರಗಳ ಹೊರತಾಗಿ, ಈ ದಿನ ವರ್ಷಗಳಲ್ಲಿ ಕಂಡುಕೊಂಡ ಸ್ನೇಹ, ಹಂಚಿಕೊಂಡ ಅನುಭವಗಳು ಮತ್ತು ಅರ್ಥಪೂರ್ಣ ಸಂಪರ್ಕಗಳನ್ನು ಸಹ ಸಂಭ್ರಮಿಸುತ್ತದೆ. ನಮ್ಮ ಪದವೀಧರರು ಹೊಸ ಹಾದಿಗಳನ್ನು ತುಳಿಯುತ್ತಿದ್ದಂತೆ, ಜಾಗತಿಕ ಜಾಲ ಮತ್ತು ಓದಿದ ಶಿಕ್ಷಣ ಸಂಸ್ಥೆಯೊಂದಿಗೆ ಆಳವಾದ ಸಂಬಂಧವನ್ನು ತಮ್ಮ ಜೊತೆಗೊಯ್ಯುತ್ತಾರೆ. ಮಾಹೆ ಕುಟುಂಬದ ಭಾಗವಾಗಿ ಶಾಶ್ವತವಾಗಿ ಉಳಿಯುತ್ತಾರೆ’ ಎಂದು ಭಾವುಕ ನುಡಿಗಳನ್ನಾಡಿದರು.
ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಉಪಕುಲಪತಿ ಡಾ.ನಾರಾಯಣ ಸಭಾಹಿತ್, ಆರೋಗ್ಯ ವಿಜ್ಞಾನ ವಿಭಾಗದ ಸಹ ಉಪಕುಲಪತಿ ಡಾ.ಶರತ್ ರಾವ್ ಕೆ, ಕುಲಸಚಿವ ಡಾ.ಗಿರಿಧರ್ ಕಿಣಿ, ಮೌಲ್ಯಮಾಪನ ಕುಲಸಚಿವ ಡಾ.ವಿನೋದ್ ಥಾಮಸ್ ಅವರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಂಗಳೂರು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಬಿ.ಉನ್ನಿಕೃಷ್ಣನ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಮಂಗಳೂರಿನ ಮಣಿಪಾಲ ದಂತ ವಿಜ್ಞಾನ ಕಾಲೇಜಿನ ಡೀನ್ ಡಾ.ಆಶಿತಾ ಉಪ್ಪೂರ್ ವಂದಿಸಿದರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುರಿತು:
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಇದು ಸ್ವಾಯತ್ತ ವಿಶ್ವವಿದ್ಯಾಲಯವಾಗಿದೆ. ಮಾಹೆಯು ಮಣಿಪಾಲ್, ಮಂಗಳೂರು, ಬೆಂಗಳೂರು, ಜಮ್ಶೆಡ್‌ಪುರ ಮತ್ತು ದುಬೈನಲ್ಲಿ ತನ್ನ ಕ್ಯಾಂಪಸ್‌ಗಳನ್ನು ಹೊಂದಿದೆ. ಆರೋಗ್ಯ ವಿಜ್ಞಾನ (HS), ಮ್ಯಾನೇಜ್ಮೆಂಟ್, ಕಾನೂನು, ಮಾನವಿಕ ಮತ್ತು ಸಮಾಜ ವಿಜ್ಞಾನ (MLHS), ತಂತ್ರಜ್ಞಾನ ಮತ್ತು ವಿಜ್ಞಾನ (T&S) ವಿಭಾಗಗಳಲ್ಲಿ 400ಕ್ಕೂ ಹೆಚ್ಚು ವಿಶೇಷ ಕೋರ್ಸ್ ಗಳನ್ನು ಹೊಂದಿದೆ. ಉತ್ತಮ ಶೈಕ್ಷಣಿಕ ದಾಖಲೆ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಗಮನಾರ್ಹ ಸಂಶೋಧನಾ ಕೊಡುಗೆಗಳೊಂದಿಗೆ, ಮಾಹೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಅಕ್ಟೋಬರ್ 2020ರಲ್ಲಿ, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ‘ಪ್ರತಿಷ್ಠಿತ ಸಂಸ್ಥೆ’ ಎನ್ನುವ ಉನ್ನತ ಸ್ಥಾನಮಾನ ನೀಡಿದೆ. ಪ್ರಸ್ತುತ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಪಟ್ಟಿಯಲ್ಲಿ (NIRF) 4ನೇ ಸ್ಥಾನದಲ್ಲಿದೆ, ಒಳ್ಳೆಯ ಕಲಿಕೆ ಅನುಭವ, ಸುಂದರ ಕ್ಯಾಂಪಸ್ ಬಯಸುವ ವಿದ್ಯಾರ್ಥಿಗಳಿಗೆ ಹಾಗು ಪ್ರತಿಭಾನ್ವಿತರನ್ನು ಪ್ರತಿಭೆಯನ್ನು ಹುಡುಕುತ್ತಿರುವ ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಾರ್ಪೊರೇಟ್‌ಗಳಿಗೆ ಮಾಹೆಯು ಆದ್ಯತೆಯ ಆಯ್ಕೆಯಾಗಿದೆ.