ಒಡಿಶಾ: ವ್ಯಕ್ತಿಯೊಬ್ಬ ಪತ್ನಿ ಹಾಗೂ ಅತ್ತೆಯನ್ನು ಕೊಂದು ಹೂತುಹಾಕಿ, ಅದರ ಮೇಲೆ ಬಾಳೆ ಗಿಡ ನೆಟ್ಟಿರುವ ಘಟನೆ ಒಡಿಶಾದ ಮಯೂರ್ಭಂಜ್ನಲ್ಲಿ ನಡೆದಿದೆ. ಕೊಲೆಯ ಹಿಂದಿನ ನಿಖರವಾದ ಉದ್ದೇಶ ಇನ್ನೂ ತಿಳಿದುಬಂದಿಲ್ಲವಾದರೂ, ಆರಂಭಿಕ ಪೊಲೀಸ್ ತನಿಖೆಯಲ್ಲಿ ದಂಪತಿ ಮಧ್ಯೆ ಸಾಕಷ್ಟು ಭಿನ್ನಾಭಿಪ್ರಾಯಗಳಿರುವುದು ತಿಳಿದುಬಂದಿದೆ.
23 ವರ್ಷದ ಸೋನಾಲಿ ದಲಾಲ್ ಅವರ ತಾಯಿ ಸುಮತಿ ದಲಾಲ್ ಅವರು ಜುಲೈ 12 ರಂದು ರಾಜಿ ಪ್ರಯತ್ನದಲ್ಲಿ ತನ್ನ ಮಗಳನ್ನು ಪತಿ ದೇಬಾಶಿಶ್ ಪಾತ್ರ ಅವರ ಮನೆಗೆ ಕರೆತಂದಿದ್ದರು. ಜುಲೈ 19ರಂದು ಆಕೆಯ ಪತಿ ಪತ್ನಿ ಹಾಗೂ ಅತ್ತೆ ಇಬ್ಬರೂ ಮಲಗಿರುವಾಗ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ. ಪಾತ್ರಾ ಎರಡೂ ಶವಗಳನ್ನು ತನ್ನ ಮನೆಯ ಹಿಂದಿನ ನಿಂಬೆ ತೋಟಕ್ಕೆ ತೆಗೆದುಕೊಂಡು ಹೋಗಿ ಹೂತುಹಾಕಿದ್ದಾನೆ. ನಂತರ ಅನುಮಾನ ಬರದಂತೆ ಆ ಸ್ಥಳದಲ್ಲಿ ಬಾಳೆ ಗಿಡಗಳನ್ನು ನೆಟ್ಟಿದ್ದ.
ನಂತರ ಯಾರಿಗೂ ಅನುಮಾನ ಬರವಾರದೆಂದು ಪತ್ನಿ ಹಾಗೂ ಅತ್ತೆ ಕಾಣೆಯಾಗಿದ್ದಾರೆಂದು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದ.ಅತ್ತೆ ಮತ್ತು ಹೆಂಡತಿ ಮಗನನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳಿದ್ದ. ಆದರೆ ಯಾವುದೇ ನೋವು ಆತನ ಮುಖದಲ್ಲಿ ಕಂಡಿರಲಿಲ್ಲ. ಅದಾದ ಬಳಿಕ ಪಾತ್ರಾ ಹಾಗೂ ಅವರ ಮಗ ಯಾವುದೇ ಚಿಂತೆ ಇಲ್ಲದೆ ದಿನವನ್ನು ಕಳೆಯುತ್ತಿದ್ದರು.
ಇದು ಗ್ರಾಮಸ್ಥರು ಹಾಗೂ ಪೊಲೀಸರಲ್ಲಿ ಅನುಮಾನ ಹುಟ್ಟು ಹಾಕಿತ್ತು.ನಂತರ ಅವರ ನಿಂಬೆ ತೋಟದಲ್ಲಿನ ಮಣ್ಣು ಸಡಿಲವಾಗಿರುವುದನ್ನು ಮತ್ತು ಅಲ್ಲಿ ಹೊಸ ಬಾಳೆ ಮರಗಳನ್ನು ನೆಡಲಾಗಿರುವುದನ್ನು ಊರಿನ ಜನರು ಗಮನಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪತ್ರಾ ಅವರನ್ನು ಪ್ರಶ್ನಿಸಿದಾಗ, ಅವರು ಅಪರಾಧವನ್ನು ಒಪ್ಪಿಕೊಂಡರು ಮತ್ತು ಪೊಲೀಸರನ್ನು ಸಮಾಧಿ ಸ್ಥಳಕ್ಕೆ ಕರೆದೊಯ್ದರು. ಕೊಳೆತ ಶವಗಳು ತೋಟದಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.