ಬಿಕಾನೇರ್: ಸಬರಮತಿ ಎಕ್ಸ್ಪ್ರೆಸ್ ರೈಲಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬೆಡ್ ಶೀಟ್ ವಿಚಾರವಾಗಿ ಸೈನಿಕ ಮತ್ತೋರ್ವನ ವಿರುದ್ಧ ವಾಗ್ವಾದ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಸೈನಿಕನನ್ನು ಇರಿದು ಕೊಲೆ ಮಾಡಲಾಗಿದೆ. ಮೃತರನ್ನು ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ನಿಯೋಜನೆಗೊಂಡಿದ್ದ ಜಿಗ್ನೇಶ್ ಚೌಧರಿ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಸೈನಿಕ ವ್ಯಕ್ತಿಯೊಬ್ಬರ ಬಳಿ ಬೆಡ್‌ಶೀಟ್ ಕೇಳಿದ್ದರು ಮತ್ತು ವಿವಾದ ಉಲ್ಬಣಗೊಂಡಿತ್ತು. ಆರೋಪಿಯನ್ನು ಜುಬೈರ್ ಮೆಮನ್ ಎಂದು ಗುರುತಿಸಲಾಗಿದೆ. ರಾಜಸ್ಥಾನ ಬಿಕಾನೆರ್ ರೈಲ್ವೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೃತ ಜವಾನ ಫಿರೋಜ್‌ಪುರ ಕಂಟೋನ್ಮೆಂಟ್‌ನಿಂದ ರೈಲು ಹತ್ತಿದ್ದರು. ಅವರು ಗುಜರಾತ್‌ನ ಸಬರಮತಿ ನಿವಾಸಿಯಾಗಿದ್ದು ಮನೆಗೆ ಪ್ರಯಾಣಿಸುತ್ತಿದ್ದರು. ಬೆಡ್‌ಶೀಟ್‌ನ ಬಗ್ಗೆ ನಡೆದ ವಾಗ್ವಾದದ ನಂತರ, ಅವರನ್ನು ಚಾಕುವಿನಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಸೈನಿಕ ಗಾಯಗೊಂಡು ಸಾವನ್ನಪ್ಪಿದ್ದಾರೆ. ಈ ಘಟನೆ ಭಾನುವಾರ ರಾತ್ರಿ ನಡೆದಿದೆ ಎಂದು ಹೇಳಲಾಗಿದೆ.
ಇಲ್ಲಿಯವರೆಗಿನ ಮಾಹಿತಿಯ ಪ್ರಕಾರ, ಈ ವಿವಾದ ಎಸಿ ಕೋಚ್ ಒಳಗೆ ನಡೆದಿದೆ. ಈ ಜಗಳ ನಡೆದ ನಂತರ, ಜುಬೈರ್ ಜಿಗ್ನೇಶ್ ನನ್ನು ಹುಡುಕುತ್ತಾ ತನ್ನ ಕೋಚ್ ಬಳಿಗೆ ಹೋದರು. ನಂತರ ಅವರು ಸೈನಿಕನ ಕಾಲಿನ ಪಾದದ ಭಾಗಕ್ಕೆ ಇರಿದಿದ್ದರು. ಬಳಿಕ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.
ಈ ವರ್ಷದ ಆರಂಭದಲ್ಲಿ, ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ಒಬ್ಬ ಸೈನಿಕರೊಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ವರದಿಗಳ ಪ್ರಕಾರ, ಕೊಲೆ ಪ್ರಕರಣವೊಂದರಲ್ಲಿ ಸಾಕ್ಷಿ ಹೇಳಲು ಸೈನಿಕ ರಜೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, ಏಪ್ರಿಲ್ 10 ರಂದು ಸೈನಿಕನ ತಲೆ ಮತ್ತು ಎದೆಗೆ ಗುಂಡು ಹಾರಿಸಲಾಗಿತ್ತು ಎಂದು ವರದಿಯಾಗಿದೆ.
ಮೃತರನ್ನು ಸಹರಾನ್‌ಪುರದ ಮುದಿಖೇಡಿ ಗ್ರಾಮದ 27 ವರ್ಷದ ವಿಕ್ರಾಂತ್ ಗುರ್ಜರ್ ಎಂದು ಗುರುತಿಸಲಾಗಿದೆ. ಅವರನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾಗಿತ್ತು ಮತ್ತು ಕೊಲೆ ಪ್ರಕರಣವೊಂದರಲ್ಲಿ ಸಾಕ್ಷಿ ಹೇಳಲು ನಾಲ್ಕು ದಿನಗಳ ರಜೆಯ ಮೇಲೆ ಮನೆಗೆ ಮರಳಿದ್ದರು.

