ಬದಿಯಡ್ಕ: ತುಳುನಾಡಿನ ಮಣ್ಣಿನ ಬಣ್ಣದ ಬದುಕುಗಳನ್ನು ತಮ್ಮ ಮಂದಾರ ರಾಮಾಯಣ ಕಾವ್ಯದ ಮೂಲಕ ಚಿತ್ರಿಸಿ ಇಲ್ಲಿಯ ಪರಿಸರದ ವರ್ಣನೆ ನೀಡಿರುವುದು ಮಂದಾರ ಕೇಶವ ಭಟ್ಟರ ಕಾವ್ಯೋತ್ಪತ್ತಿಯ ಅಂದಗಾರಿಕೆಯನ್ನು ಪ್ರತಿಬಿಂಬಿಸಿದೆ. ತುಳುವ ಮಹಾಸಭೆಯ ಮೂಲಕ ತೌಳವ ಸಂಸ್ಕøತಿಯ ಮಹಾ ಪರಂಪರೆಯೊಂದು ಮತ್ತೆ ಗರಿಗೆದರಿ ಸ್ವರೂಪ ಸ್ಪರ್ಶ ನೀಡುವುದು ಉತ್ತಮ ಕೆಲಸ ಎಂದು ಮಂದಾರ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷ ಡಾ.ರಾಜೇಶ್ ಮಂದಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾನ್ಯ ಸಮೀಪದ ಕಾರ್ಮಾರು ಶ್ರೀಮಹಾವಿಷ್ಣು ಸನ್ನಿಧಿಯಲ್ಲಿ ಶುಕ್ರವಾರ ತುಳುವ ಮಹಾಸಭೆ ಕಾಸರಗೋಡು ತಾಲೂಕು ಸಮಿತಿ ಆಯೋಜಿಸಿದ್ದ ಆಟಿ ತಿಂಗಳ ವಿಶೇಷ ಕಾರ್ಯಕ್ರಮದಲ್ಲಿ ಮಂದಾರ ರಾಮಾಯಣದ ಸುಗಿಪು-ದುನಿಪು(ವಾಚನ-ಪ್ರವಚನ)ಸಮಾರಂಭವನ್ನು ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಮಂದಾರ ರಾಮಾಯಣದ ಮೂಲಕ ಬಿಚ್ಚಿಕೊಳ್ಳುವ ಕಥಾನಕದಲ್ಲಿ ಪ್ರತಿಯೊಂದು ಪಾತ್ರಗಳೂ ನಮ್ಮ ಸನಿಹದ ವ್ಯಕ್ತಿಗಳಾಗಿ ನಮ್ಮನ್ನು ಮಾತನಾಡಿಸುವ ಮೂಲಕ ಸಂವಾದದೊಂದಿಗೆ ಇಲ್ಲಿಯ ಸೊಗಡಿನ ಶ್ರೀಮಂತಿಕೆಯನ್ನು ಪ್ರತಿಬಿಂಬಿಸಿದೆ. ಹೊಸ ತಲೆಮಾರಿಗೆ ನವ ಅನುಭೂತಿ ನೀಡುವಲ್ಲಿ ತುಳುವ ಮಹಾಸಭೆ ನಡೆಸುವ ಕಾರ್ಯ ಶ್ಲಾಘನೀಯ ಎಂದವರು ತಿಳಿಸದರು.
ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ರಾಧಾಕೃಷ್ಣ ರೈ ಕಾರ್ಮಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇನ್ನಷ್ಟು ಜನಪರ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಶ್ರೀಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಆನುವಂಶಿಕ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಜೀಣೋದ್ಧಾರ-ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ, ತುಳು ವಲ್ರ್ಡ್ ಫೌಂಡೇಶನ್ ನಿರ್ದೇಶಕ ಡಾ.ರಾಜೇಶ್ ಆಳ್ವ, ಪ್ರಮೋದ್ ಸಪ್ರೆ, ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ವಾಚನಕಾರರಾದ ಪ್ರಶಾಂತ ರೈ ಪುತ್ತೂರು, ರಚನಾ ಚಿತ್ಕಲ್ ಹಾಗೂ ಲವ ಕುಮಾರ ಐಲ ಉಪಸ್ಥಿತರಿದ್ದರು. ಈ ಸಂದರ್ಭ ವಾಚನ-ಪ್ರವಚನ ನೀಡಿದವರನ್ನು ಗೌರವಿಸಲಾಯಿತು. ತುಳುವ ಮಹಾಸಭೆ ಕಾರ್ಮಾರು ಘಟಕದ ಸಂಚಾಲಕರಾಗಿ ಮಹೇಶ್ ವಳಕ್ಕುಂಜ ಹಾಗೂ ರಾಧಾಕೃಷ್ಣ ರೈ ಅವರಿಗೆ ಜವಾಬ್ದಾರಿ ನೀಡಲಾಯಿತು. ಡಾ.ರಾಜೇಶ್ ಆಳ್ವ ಬದಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ ನಿರೂಪಿಸಿದರು. ಪುರುಷೋತ್ತಮ ಭಟ್ ಕೆ. ವಂದಿಸಿದರು. ಯಶೋಧರ ಬಂಗೇರ ಹಾಗೂ ಭಗತ್ ಸಹಕರಿಸಿದರು.
ಆಟಿ ಮಾಸದ ಕಾರ್ಯಕ್ರಮದ ಅಂಗವಾಗಿ ಶ್ರೀದೇವರಿಗೆ ಬೆಳಿಗ್ಗೆ 7.30ಕ್ಕೆ ಬೆಳಿಗ್ಗಿನ ಪೂಜೆ, 8 ರಿಂದ 12 ತೆಂಗಿನಕಾಯಿ ಗಣಪತಿ ಹೋಮ, 12.30ಕ್ಕೆ ಮಹಾಪೂಜೆ, ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು. ಸಂಜೆ 6.30 ರಿಂದ ದುರ್ಗಾಪೂಜೆ, ರಾತ್ರಿ 8ಕ್ಕೆ ಮಹಾಪೂಜೆ ನಡೆಯಿತು. ಸ್ಥಳೀಯ ನೂರಾರು ಮಂದಿ ಪಾಲ್ಗೊಂಡರು.