ಬೆಂಗಳೂರು: ಬೆಂಗಳೂರು, ಕೋಲಾರದಲ್ಲಿ ಮಂಗಳವಾರ ರಾತ್ರಿ ದಿಢೀರ್ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಎಸ್ಐ ಚಂದ್ ಪಾಷಾ ಹಾಗೂ ಶಂಕಿತ ಉಗ್ರನ ತಾಯಿ ಅನೀಸ್ ಫಾತೀಮಾರನ್ನು ಬಂಧಿಸಲಾಗಿದೆ. ಈ ಮೂವರಿಗೆ ಮಂಗಳೂರಿನ ಕುಕ್ಕರ್ ಬಾಂಬ್, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ರಾಮೇಶ್ವರಂ ಕೆಫೆ ಸ್ಫೋಟ ಸೇರಿದಂತೆ ದಕ್ಷಿಣ ಭಾರತದಲ್ಲಿ ಸಂಭವಿಸಿದ ಹಲವು ಸ್ಫೋಟಗಳ ಮಾಸ್ಟರ್ ಮೈಂಡ್ ನಾಸೀರ್ ಜತೆ ಪ್ರಬಲವಾದ ಸಂಪರ್ಕ ಇತ್ತು ಎಂಬುದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ದೊಡ್ಡ ವಿಧ್ವಂಸಕ ಕೃತ್ಯಕ್ಕೆ ಸಂಚು
ಜೈಲಿನಲ್ಲಿದ್ದುಕೊಂಡೇ ಉಗ್ರ ಚಟುವಟಿಕೆಗಳ ಬಗ್ಗೆ ನಾಸೀರ್ ಸಂಚು ಹೂಡುತ್ತಿದ್ದ. ಜೈಲಿನಿಂದಲೇ ಯುವಕರ ತಂಡ ತಯಾರು ಮಾಡುತ್ತಿದ್ದ. ದಕ್ಷಿಣ ಭಾರತದಲ್ಲಿ ನಡೆದ ಹಲವು ಸ್ಫೋಟಗಳ ಮಾಸ್ಟರ್ ಮೈಂಡ್ ಈತನಾಗಿದ್ದು, ಹಲವು ಕೇಸ್ಗಳಲ್ಲಿ ಈತನ ಕೈವಾಡವಿದೆ ಎಂಬುದು ಎನ್ಐಎ ತನಿಖೆಯಲ್ಲಿ ತಿಳಿದುಬಂದಿರುವುದು ಗೊತ್ತಾಗಿದೆ. ಸ್ಲೀಪರ್ ಸೆಲ್ ಜತೆ ನೇರ ಸಂಪರ್ಕ ಹೊಂದಿರುವ ಉಗ್ರ ನಾಸೀರ್, ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದ. ಅದಕ್ಕಾಗಿ ಜೈಲಿನಲ್ಲಿ ಇದ್ದುಕೊಂಡೇ ಯುವಕರ ತಂಡ ಕಟ್ಟಿದ್ದ ಎನ್ನಲಾಗಿದೆ.
ಕೊಲೆ ಕೇಸ್ನಲ್ಲಿ ಶಾಮೀಲಾಗಿದ್ದ ಯುವಕರ ತಂಡ ಕಟ್ಟಿದ್ದ ನಾಸೀರ್
ಉಗ್ರ ನಾಸೀರ್, ಕೊಲೆ ಕೇಸ್ನಲ್ಲಿ ಶಾಮೀಲಾಗಿದ್ದ ಯುವಕರ ತಂಡ ಕಟ್ಟಿದ್ದ. ಜುನೈದ್, ಮೊಹಮ್ಮದ್ ಹರ್ಷದ್ ಖಾನ್, ಸುಹೈಲ್, ಫೈಜಲ್, ಜಾಹಿದ್ ತಬ್ರೇಜ್, ಮುದಾಸಿರ್ ಇರುವ ತಂಡ ರೆಡಿ ಮಾಡಿದ್ದ. ಈ ತಂಡ ಗ್ರೆನೇಡ್, ಪಿಸ್ತೂಲ್, ಸ್ಫೋಟಕ ವಸ್ತುಗಳ ಸಮೇತ ಸಿಕ್ಕಿಬಿದ್ದಿತ್ತು. ಬೆಂಗಳೂರಿನ ಆರ್.ಟಿ.ನಗರ, ಹೆಬ್ಬಾಳದಲ್ಲಿ ಸಿಕ್ಕಿ ಬಿದ್ದಿತ್ತು. ಇದೀಗ ಪ್ರಮುಖ ಆರೋಪಿ ಜುನೈದ್ಗಾಗಿ ಎನ್ಐಎ ಹುಡುಕಾಟ ನಡೆಸುತ್ತಿದೆ. ಈ ವಿಚಾರ ಸಂಬಂಧ ದಾಳಿ ನಡೆಸಿದಾಗ ಡಾ. ನಾಗರಾಜ್, ಚಂದ್ ಪಾಷಾ ಹಾಗೂ ಅನೀಸ್ ಫಾತೀಮಾ ಸಿಕ್ಕಿಬಿದ್ದಿದ್ದಾರೆ.