ಮಂಗಳೂರು: ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ದ.ಕ. ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ.) ಮಂಗಳೂರು ಸಹಯೋಗದಲ್ಲಿ ʻಕುಂಭಕಲಾವಳಿ-ಕುಲಾಲ ಕಲಾ ಸೇವಾಂಜಲಿ’ ಕಾರ್ಯಕ್ರಮವು ಜ. 4ರಂದು ಪುರಭವನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಸಮಾರಂಭಕ್ಕೆ ಸಂಸದ- ಯದುವೀರ್ ಒಡೆಯರ್ ಹಾಗೂ ಸಚಿವರಾದ ಸತೀಶ್ ಜಾರಕಿಹೊಳಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಅನಿಲ್ ದಾಸ್ ಹೇಳಿದ್ದಾರೆ.
ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ, ಸಭಾಕಾರ್ಯಕ್ರಮ, ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಹಾಗೂ ಆಶಕ್ತರಿಗೆ ನೆರವು ಮುಂತಾದ ಸಾಮಾಜಿಕ ಸೇವಾ ಚಟುವಟಿಕೆಗಳು ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಮುದಾಯದ ಸುಮಾರು 3000 ಮಂದಿ ಜನಸೇರುವ ನಿರೀಕ್ಷೆ ಇದೆ ಎಂದು ವಿವರಿಸಿದರು.
ಕಾರ್ಯಕ್ರಮವು ತನ್ನ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 8.30ಕ್ಕೆ ವೈಷ್ಣವಿ ಕ್ಷೇತ್ರ ಮುಳಿಯದ ಶಿವಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ, ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಡಾ. ರವಿ ಎನ್. ಅವರಿಂದ ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಳ್ಳಲಿದೆ. ಬೆಳಿಗ್ಗೆ 9 ಗಂಟೆಗೆ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದ್ದು, ಬೆಳಿಗ್ಗೆ 9.30ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಲಿದ್ದಾರೆ. ಶ್ರೀ ಧಾಮ ಮಾಣಿಲದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ ಎಂದು ಅನಿಲ್ ದಾಸ್ ವಿವರಿಸಿದರು.
2007–08ರಲ್ಲಿ ಕುಲಾಲ/ಕುಂಭಾರ/ಮೂಲ್ಯ ಸಮುದಾಯದ ಯುವಶಕ್ತಿಯನ್ನು ಜಿಲ್ಲಾ–ರಾಜ್ಯ ಮಟ್ಟದಲ್ಲಿ ಸಂಘಟಿಸುವ ಸದುದ್ದೇಶದಿಂದ ಸ್ಥಾಪಕ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಹಾಗೂ ಸಮಾನ ಮನಸ್ಕರ ಮೂಲಕ ಸ್ಥಾಪನೆಯಾದ ಕುಲಾಲ ಯುವವೇದಿಕೆ, ಇಂದು ಅವಿಭಜಿತ ಜಿಲ್ಲೆಯಲ್ಲಿ ಎಂಟು ವಿಧಾನಸಭಾ ಘಟಕಗಳು ಹಾಗೂ ವಲಯ ಸಮಿತಿಗಳ ಮೂಲಕ ಬಲಿಷ್ಠ ಸಂಘಟನೆಯಾಗಿ ಬೆಳೆದಿದೆ. ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಸಂಘಟನೆ, ಸಮುದಾಯದ ಪ್ರತಿಭಾವಂತರನ್ನು ಗುರುತಿಸುವುದರ ಜೊತೆಗೆ ಬಡತನ ರೇಖೆಗಿಂತ ಕೆಳಗಿನವರಿಗೆ ನೆರವು ನೀಡಿದ್ದು, ಸೂರು ಇಲ್ಲದವರಿಗೆ ಕಾನೂನು ಚೌಕಟ್ಟಿನಲ್ಲಿ 2 ಕ್ಕಿಂತ ಹೆಚ್ಚು ಮನೆಗಳನ್ನು ನಿರ್ಮಿಸಿ ಕೊಟ್ಟಿದೆ ಎಂದರು.
ಅಲ್ಲದೆ, ಮಂಗಳೂರಿನ ಬೊಂದೆಲ್ ವೃತ್ತ ಹಾಗೂ ಕಾರ್ಕಳ ಜೋಡು ರಸ್ತೆಯಲ್ಲಿ ಸುಸಜ್ಜಿತ ‘ಸರ್ವಜ್ಞ ವೃತ್ತ’ ನಿರ್ಮಾಣ ಸೇರಿದಂತೆ ಸಂಸ್ಥೆಯ ಸೇವೆಗಳನ್ನು ಪರಿಗಣಿಸಿ 2023ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಪುರಸ್ಕರಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹತ್ತು ಮಂದಿ ಸಾಧಕರಿಗೆ ಕುಲಾಲ ಸಿಂಧೂರ ಪ್ರಶಸ್ತಿ ಪ್ರದಾನ ನಡೆಯಲಿದೆ. ಜೊತೆಗೆ ಶೈಕ್ಷಣಿಕ ಪ್ರೋತ್ಸಾಹ ಧನ, ವೈದ್ಯಕೀಯ ನೆರವು ಹಾಗೂ ಆರ್ಥಿಕ ಸಹಾಯ ವಿತರಿಸಲಾಗುತ್ತದೆ ಎಂದು ಅನಿಲ್ ದಾಸ್ ವಿವರಿಸಿದರು.

