ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ : ಸಮ್ಮೇಳನಾಧ್ಯಕ್ಷರಾಗಿ ಅಬ್ದುಲ್‌ ರಹಿಮಾನ್‌ ಕುತ್ತೆತ್ತೂರು ಆಯ್ಕೆ

0
51

ವರದಿ ರಾಯಿ ರಾಜ ಕುಮಾರ.
ಮಂಗಳೂರು ತಾಲೂಕಿನ ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಹಮ್ಮಿಕೊಂಡಿರುವ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ, ಕವಿ ಅಬ್ದುಲ್‌ ರಹಿಮಾನ್‌ ಕುತ್ತೆತ್ತೂರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಅಕಾಡಮಿಯ ಸರ್ವ ಸದಸ್ಯರ ಸಭೆ ಮತ್ತು ಸಮ್ಮೇಳನ ಸ್ವಾಗತ ಸಮಿತಿ ಸಭೆಯಲ್ಲಿ ಸರ್ವಾನುಮತದ ಈ ಆಯ್ಕೆ ನಡೆದಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್‌ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಬ್ದುಲ್‌ ರಹಿಮಾನ್‌ ಕುತ್ತೆತ್ತೂರು ಅವರ, ಮಹಾಕವಿ ಸರ್ವಜ್ಞನ ವಚನಗಳ ಭಾಷಾಂತರವನ್ನೊಳಗೊಂಡ ʼಜೀಯಸೆಲೆʼ ಬ್ಯಾರಿ ಕವನ ಸಂಕಲನ, ʼಬ್ಯಾರಿ ಪಂಚತಂತ್ರʼ (ಕನ್ನಡದಿಂದ ಬ್ಯಾರಿಗೆ ಅನುವಾದಿಸಿದ ಪಂಚತಂತ್ರ ಕತೆಗಳ ಅನುವಾದ ಗೃಂಥ) ಮತ್ತು ʼಸಾಧನೆಡೊ ಸರದಾರ ಅಭಿವೃದ್ಧಿರೊ ಕಿನಾವುಗಾರ ಸರ್. ಎಂ. ವಿಶ್ವೇಶ್ವರಯ್ಯʼ ಕೃತಿಗಳನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದೆ.

ಕಾದಂಬರಿಗಾರ ನಿಯಾಝ್ ಪಡೀಲ್‌ರವರ ʼಯತೀಮ್ʼ ಕನ್ನಡ ಕಾದಂಬರಿಯನ್ನುಇವರು ಬ್ಯಾರಿಗೆ ಅನುವಾದಿಸಿದ್ದು ಇತ್ತೀಚೆಗೆ ಬಿಡುಗಡೆಗೊಂಡಿದೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಹೊರತಂದ ʼಬ್ಯಾರಿ-ಕನ್ನಡ-ಇಂಗ್ಲೀಷ್ ನಿಘಂಟಿನ ಸಹಸಂಪಾದಕರಾಗಿ,ʼಬ್ಯಾರಿ-ಇಂಗ್ಲೀಷ್-ಕನ್ನಡ-ಹಿಂದಿ ಪದಕೋಶದ ಬ್ಯಾರಿ ಪದಗಳ ಸಂಗ್ರಾಹಕರಲ್ಲಿ ಓರ್ವರಾಗಿ, ಬ್ಯಾರಿ ವ್ಯಾಕರಣ ಗ್ರಂಥದ ಇಬ್ಬರು ಸಂಪಾದಕರಲ್ಲಿ ಓರ್ವರಾಗಿ, ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಹೊರತಂದ ʼಬ್ಯಾರಿ-ಕನ್ನಡ ಗಾದೆ-ನುಡಿಗಟ್ಟು-ಒಗಟುಗಳ ಕೋಶʼದ ಸಂಪಾದಕರಲ್ಲಿ ಓರ್ವರಾಗಿ ಕೆಲಸ ನಿರ್ವಹಿಸಿದ್ದಾರೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ʼಬ್ಯಾರಿ ಅಧ್ಯಯನ ಪೀಠʼದ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರ ಬ್ಯಾರಿ ಸಾಹಿತ್ಯ ಕ್ಷೇತ್ರದ ಸೇವೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿ ಲಭಿಸಿದೆ.
ಲೋಕಾನುಗ್ರಹಿ ಹಜ್ರತ್ ಮುಹಮ್ಮದ್ ಪೈಗಂಬರ್ʼ ಮತ್ತು ‘ಬಕ್ರೀದ್’ ಇವರ ಪ್ರಕಟಿತ ಕನ್ನಡ ಕೃತಿಗಳು.

LEAVE A REPLY

Please enter your comment!
Please enter your name here