ಐಲೇಸಾ ವಯೋಸಮ್ಮಾನ್ 2025 ಪುರಸ್ಕಾರಕ್ಕೆ ಮಂಗಳೂರಿನ ಶಿಕ್ಷಕಿ,ಯಕ್ಷಗಾನ ಕಲಾವಿದೆ ಸಾವಿತ್ರಿ ಶ್ರೀನಿವಾಸ್ ರಾವ್ ಆಯ್ಕೆ.

0
25


ಐಲೇಸಾ ತನ್ನ ಹುಟ್ಟು ಹಬ್ಬದ ಸಲುವಾಗಿ ಕೊಡಮಾಡುವ ವಯೋಸಮ್ಮಾನ್ ವಿಶಿಷ್ಠ ಪುರಸ್ಕಾರಕ್ಕೆ ಶಿಕ್ಷಕಿ, ಮಕ್ಕಳ ವ್ಯಕ್ತಿತ್ವ ವಿಕಸನದ ಶಿಬಿರಗಳಿಂದ ತನ್ನ ವಿದ್ಯಾರ್ಥಿ ವಲಯದಲ್ಲಿ ವಿಶೇಷ ಶ್ರೇಯ ಪಡೆದ 81 ರ ಹರೆಯದ ಶ್ರೀಮತಿ. ಸಾವಿತ್ರಿ ಎಸ್ ರಾವ್ ಆಯ್ಕೆಯಾಗಿದ್ದಾರೆ.

ಶಿಕ್ಷಕಿಯಾಗಿರುವ ಇವರು ತನ್ನ 66 ನೇ ವಯಸ್ಸಿನಲ್ಲಿ ಯಕ್ಷಗಾನ ನಾಟ್ಯ ಕಲಿತು 113 ಪ್ರದರ್ಶನಗಳನ್ನು ಕೊಟ್ಟು ಹಾಗೂ ತಾಳ ಮದ್ದಳೆಗಳಲ್ಲಿ ಭಾಗವಹಿಸಿ ಇವರು ಯಾವುದೇ ಕಲಿಕೆಗೆ ವಯಸ್ಸಿನ ಹಂಗಿಲ್ಲವೆಂದು ನಿರೂಪಿಸಿದವರು. ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಕನ್ನಡ ತುಳು ಹಾಡುಗಳನ್ನು , ನಾಟಕಗಳನ್ನು ಬರೆದು ಹಾಡಿ, ಆಡಿ ಜನಜನಿತರಾದವರು.
ಮಂಗಳೂರಿನ ಅಶೋಕನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕಿಯಾಗಿ ಸುಮಾರು 27 ವರ್ಷಗಳ ಕಾಲ ನಿರಂತರ ಸೇವೆಯಲ್ಲಿದ್ದು ಸ್ವಯಂ ನಿವೃತ್ತರಾದವರು.
ಮಕ್ಕಳಿಗೆ ಭಗವದ್ಗೀತೆ ಕಂಠ ಪಾಠ ,ಭಾವ ಗೀತೆ ಗಾಯನ, ಕತೆ ಹೇಳುವ,ಭಾಷಣ ಕಮ್ಮಟ ಹೀಗೆ ಹಲವಾರು ಮಕ್ಕಳ ವ್ಯಕ್ತಿತ್ವ ವಿಕಸನದ ಕಾರ್ಯಕ್ರಮಗಳನ್ನು ಐನೂರಕ್ಕಿಂತಲೂ ಅಧಿಕ ಶಾಲೆಗಳಲ್ಲಿ ನಡೆಸಿ ಮಕ್ಕಳ ಮನ ಗೆದ್ದವರು.
ನವಿಲು ಗರಿ, ಹಾಡು ಬಾ ಕೋಗಿಲೆ ಕವನ ಸಂಕಲನ ಮತ್ತು ಒಂದು ಗುಬ್ಬಿಯ ಕಥೆ, ಹುಲಿಯನ್ನು ಮೆಚ್ಚಿಸಿದ ಹುಡುಗ ಕಥಾ ಸಂಕಲನಗಳನ್ನು ಬರೆದು ಅದನ್ನು ಮಕ್ಕಳ ಮಡಿಲಿಗೆ ತಲುಪಿಸಿದವರು. ಆಶಾಜ್ಯೋತಿ ಮೂಲಕ ವಿಕಲ ಚೇತನರ ಸಲುವಾಗಿ ವಿಶಿಷ್ಠರಿಗಾಗಿ ವಿಶಿಷ್ಟ ಮೇಳ ಕಾರ್ಯಕ್ರಮ ಆಯೋಜಿಸಿ ಅವರಿಗೆ ವಿಶೇಷ ಪ್ರವಾಸಗಳನ್ನು ಏರ್ಪಡಿಸಿದವರು.ತನ್ನ ಪತಿಯ ಜೊತೆ ಸೇರಿ ಕಲ್ಲಾವು ಸಾವಿತ್ರಿ ಶ್ರೀನಿವಾಸ ಟ್ರಸ್ಟ್ ಸ್ಥಾಪಿಸಿ ಅಶಕ್ತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಖರ್ಚಿಗೆ ನೆರವಾಗುತ್ತಿದ್ದಾರೆ.

ಎಲೆಮರೆಯ ಇವರ ಈ ನಿಸ್ವಾರ್ಥ ಸೇವೆಯನ್ನು ಗಮನಿಸಿ ಐಲೇಸಾ ಈ ಸಾರಿಯ ವಯೋಸಮ್ಮಾನವನ್ನು ಸಾವಿತ್ರಿ ರಾವ್ ಅವರಿಗೆ ಅಕ್ಟೋಬರ್ ತಿಂಗಳ 26 ನೇ ತಾರೀಖು ಆದಿತ್ಯವಾರ ಮಂಗಳೂರು ಬೊಕ್ಕ ಪಟ್ಟಣದ ಅಕ್ಷಯ ಸಭಾಂಗಣದಲ್ಲಿ ಮದ್ಯಾಹ್ನ 1:00 ಗಂಟೆಯಿಂದ ಆರಂಭವಾಗುವ ಸರಳ ಸಮಾರಂಭದಲ್ಲಿ ಪ್ರದಾನ ಮಾಡಲಿದೆ.

ಪುರಸ್ಕಾರವು ಒಟ್ಟು ಒಂದು‌ಲಕ್ಷ ಮೊತ್ತವನ್ನೊಳಗೊಂಡಿದ್ದು ಅವರ ವಯಸ್ಸಿನಷ್ಟೇ ನಗದು ಅಂದರೆ ರೂಪಾಯಿ 81000 ಹಾಗೂ ಉಳಿದಂತೆ ಅವರು ಇಷ್ಟದ ಉಡುಗೊರೆಗಳೊಂದಿಗೆ ಸಂಗೀತ, ಸಾಹಿತ್ಯ ಸಂಭ್ರಮದ ಜೊತೆಯಲ್ಲಿ ವಿಶಿಷ್ಠವಾಗಿ ನೀಡಲಾಗುವುದು.
ಕಾರ್ಯಕ್ರಮದಲ್ಲಿ ದೇಶ, ವಿದೇಶಗಳಿಂದ ಗಣ್ಯರು, ಸಾವಿತ್ರಿ ರಾವ್ ಅವರ ವಿದ್ಯಾರ್ಥಿಗಳು ಸಹಪಾಠಿಗಳು ಭಾಗವಹಿಸುವರು.
ಸಮಾಜಮುಖಿ ಈ‌ ಕಾರ್ಯಕ್ರಮದಲ್ಲಿ ಎಲ್ಲರೂ ಮುಕ್ತವಾಗಿ ಭಾಗವಹಿಸಬೇಕು ಮತ್ತು ಹೆಚ್ಚಿನ ಮಾಹಿತಿಗೆ,ಸಹಾಯಕ್ಕೆ
ಅನಂತ್:9686321393
ಗೋಪಾಲ್ ಪಟ್ಟೆ:9986019293
ಅಜೇಶ್ ಚಾರ್ಮಾಡಿ:9632200892.
ಇವರನ್ನು ಸಂಪರ್ಕಿಸಬಹುದು ಎಂದು ಐಲೇಸಾ ಮಾಧ್ಯಮ‌ಸಂಚಾಲಕ ಸೂರಿ‌ಮಾರ್ನಾಡು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here