ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಭದ್ರಾವತಿ ತುಳು ಕೂಟದ ಸಹಯೋಗದಲ್ಲಿ ಜೂನ್ 25 ರಂದು ಭದ್ರಾವತಿಯ ನ್ಯೂ ಟೌನ್ ಬಂಟರ ಭವನದಲ್ಲಿ ಸಂಜೆ 6.30 ಕ್ಕೆ ತುಳು ಉತ್ಸವ ನಡೆಯಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕೆ.ಆರ್. ಐ.ಡಿ. ಎಲ್ ಅಧ್ಯಕ್ಷ ಹಾಗೂ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಭದ್ರಾವತಿ ತುಳು ಕೂಟ ಅಧ್ಯಕ್ಷ ಪಿ.ಸುಧಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ತುಳು ಕೂಟದ ಪ್ರಧಾನ ಕಾರ್ಯದರ್ಶಿ ಡಾ .ಹರೀಶ ದೇಲಂತಬೆಟ್ಟು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ನವೋದಯ ಕಲಾ ಕೂಟದಿಂದ ತುಳುನಾಡಿನ ಡೋಲಿನ ಬಗ್ಗೆ ಪರಿಚಯ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಮತ್ತು ಭದ್ರಾವತಿ ತುಳುಕೂಟದ ಸದಸ್ಯರಿಂದ ತುಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.