ವಿದ್ಯಾರ್ಥಿಗಳ ಸಂಭ್ರಮ ಮತ್ತು ಸ್ಮತಿಗಳ ಸಂಗಮ: ಅಬಕಾರಿ ನಿರೀಕ್ಷಕಿ ಸೀಮಾ ಸ್ಟಾರೀಸ್ ಅಭಿಪ್ರಾಯ
ಮಂಗಳೂರು: ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಕನಸನ್ನು ನನಸು ಮಾಡಲು ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಎಂದು ಮಂಗಳೂರು ಉತ್ತರ ವಿಭಾಗದ ಅಬಕಾರಿ ನಿರೀಕ್ಷಕರಾದ ಸೀಮಾ ಸ್ಟಾರೀಸ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ಅಧ್ಯಯನ ವಿಭಾಗದ ಅಂತಿಮ ಸೆಮಿಸ್ಟರ್ ನ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ವಾಣಿಜ್ಯ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಯುವಜನತೆಯು ಮಾದಕ ವ್ಯಸನ ಮತ್ತು ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಚಿಂತಿಸುತ್ತಿರುವ ಪೋಷಕರಲ್ಲಿ ಆತಂಕ ಹೆಚ್ಚಾಗುತ್ತಿದೆ. ಹಾಗಾಗಿ ಯುವಜನತೆಯು ಗುಣಮಟ್ಟದ ಜೀವನ ಶೈಲಿ, ಸಮಯ ನಿರ್ವಹಣೆ ಸಕಾರಾತ್ಮಕ ಚಿಂತನೆ ಮತ್ತು ಒಳ್ಳೆಯ ಹವ್ಯಾಸಗಳಿಂದ ತಮ್ಮ ಗುರಿಯನ್ನು ಸಾಧಿಸುವತ್ತ ಗಮನಹರಿಸಬೇಕು. ವಿದ್ಯಾರ್ಥಿಗಳು ಉನ್ನತ ಸಾಧನೆಯನ್ನು ತೋರಿ ತಮ್ಮ ಕುಟುಂಬ ಹಾಗೂ ಸಮಾಜಕ್ಕೆ ಉನ್ನತ ಕೀರ್ತಿಯನ್ನು ತರಲು ಶ್ರಮಿಸಬೇಕು. ಹಾಗೂ ವಿಶ್ವವಿದ್ಯಾನಿಲಯದಲ್ಲಿ ವೃದ್ಧಿಸಿಕೊಂಡ ಸಕಾರಾತ್ಮಕ ಅಂಶಗಳು ತಮ್ಮ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿ ಎಂದು ಹಾರೈಸಿದರು.
ಪ್ರಾಧ್ಯಾಪಕರಾದ ಪ್ರೊ. ಪರಮೇಶ್ವರ ಹಾಗೂ ಉಪನ್ಯಾಸಕರಾದ ಡಾ. ದಿನಕರ ಕೆಂಜೂರು ಮತ್ತು ಗುರುರಾಜ್ ಪಿ. ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರೀತಿ ಕೀರ್ತಿ ಡಿಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಾಣಿಜ್ಯ ಸಂಘದ ಚಟುವಟಿಕೆಗಳ ವರದಿಯನ್ನು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕಾರ್ತಿಕ್ ಎಸ್. ಮಂಡಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳ ಪರವಾಗಿ ಸಾರ್ಥಕ್ ಟಿ, ನಿರ್ಮಲಾ ಬಿ, ಕಾರ್ತಿಕ್ ಎಸ್, ಅಚ್ಚಯ್ಯ ಡಿ. ಪಿ. ಮತ್ತು ಅನುಷಾ ತಮ್ಮ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಉಪನ್ಯಾಸಕರಾದ ರಶ್ಮಿತಾ ಆರ್. ಕೋಟ್ಯಾನ್, ವೈಶಾಲಿ ಕೆ, ಸಿ ಲಹರಿ ಮತ್ತು ರಮ್ಯ ರಾಮಚಂದ್ರ ನಾಯ್ಕ್ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಮಹಮ್ಮದ್ ಫಾರಿಸ್ ಮತ್ತು ಕಾವ್ಯ ಎಚ್.ಎಸ್. ಉಪಸಿತರಿದ್ದರು.
ಸುದರ್ಶನ್ ಸ್ವಾಗತಿಸಿದರು. ಮೋಕ್ಷಿತ ಮತ್ತು ತಂಡದವರು ಪ್ರಾರ್ಥಿಸಿದರು. ಚೈತನ್ಯ ಧನ್ಯವಾದಗೈದರು. ಸಜಿಲಾ ಕೆ. ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ಹಾಗೂ ಅಂತಿಮ ವಿಭಾಗದ ಎಂ.ಕಾಂ. ಮತ್ತು ಎಚ್. ಆರ್. ಡಿ. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.