ಮಂಗಳೂರು: ಮಕ್ಕಳು ಡ್ರಗ್ ಅಡಿಕ್ಟ್ ಆಗಿದ್ದಾರೆಂದು ಪೋಷಕರೇ ಪೊಲೀಸರಿಗೆ ದೂರು ನೀಡಿದ ಅಚ್ಚರಿಯ ವಿದ್ಯಮಾನ ಮಂಗಳೂರಿನಲ್ಲಿ ನಡೆದಿದೆ. ಆದರೆ, ಇದರ ಪರಿಣಾಮ ಮಾತ್ರ ಒಳಿತೇ ಆಗಿದೆ. ನೂರಾರು ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಜಾಲವೇ ಪೊಲೀಸ್ ಬಲೆಗೆ ಬಿದ್ದಿದೆ. ಪೋಷಕರ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಮಂಗಳೂರು ಸೆನ್ ಕ್ರೈಮ್ ಠಾಣೆ ಪೊಲೀಸರು ಡ್ರಗ್ಸ್ ಜಾಲವೊಂದನ್ನು ಬಯಲಿಗಳೆದಿದ್ದಾರೆ.
ಪೋಷಕರ ದೂರು ಆಧರಿಸಿ ಮಂಗಳೂರಿನ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, 200ಕ್ಕೂ ಹೆಚ್ಚು ವಿದ್ಯಾರ್ಥಿ, ಉದ್ಯೋಗಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳೂರಿನ ತುಷಾರ್ (21), ಧನ್ವಿ ಶೆಟ್ಟಿ (20), ಸಾಗರ್ ಕರ್ಕೇರಾ (19), ವಿಕಾಸ್ ಥಾಪ (23), ವಿಘ್ನೇಶ್ ಕಾಮತ್ (24) ಬಂಧಿತರು. ಆರೋಪಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಒಟ್ಟು 5.20 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೆಟ್ ಮಾಡಿ ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಪ್ಯಾಕೆಟ್ಗೆ 1000 ರೂ.ನಂತೆ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳಿಗೆ ಗಾಂಜಾ ಪೂರೈಕೆಯಾಗಿದ್ದು ಎಲ್ಲಿಂದ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ಆಯುಕ್ತರ ಮನವಿ
ಎರಡು ದಿನಗಳ ಹಿಂದೆ ಇಬ್ಬರು ಪೋಷಕರು ಬಂದು ತಮ್ಮ ಮಕ್ಕಳು ಡ್ರಗ್ಸ್ ಅಡಿಕ್ಟ್ ಆಗಿರುವ ಬಗ್ಗೆ ಹೇಳಿಕೊಂಡಿದ್ದು, ದೂರು ನೀಡಿದ್ದರು. ದೂರಿನ ಬಗ್ಗೆ ಕೂಲಂಕಷ ತನಿಖೆಗೆ ತಂಡ ರಚಿಸಿದ್ದೆವು. ಅದರಂತೆ, ಕಾರ್ಯಾಚರಣೆ ನಡೆಸಿ ಡ್ರಗ್ಸ್ ಪೂರೈಕೆ ಜಾಲದ ಐವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಸದ್ಯ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಇನ್ನು ಮುಂದೆ ಅವರು ಡ್ರಗ್ಸ್ ಪೂರೈಕೆ ಮಾಡಲು ಆಗದು. ಒಬ್ಬರು ಪೋಷಕರು ಬಂದು ದೂರು ಕೊಟ್ಟಿದದರಿಂದ 200 ಜನರಿಗೆ ಡ್ರಗ್ಸ್ ಪೂರೈಕೆಯಾಗುತ್ತಿದ್ದುದನ್ನು ತಡೆಯವುದು ಸಾಧ್ಯವಾಗಿದೆ. ಅದೇ ರೀತಿ ಹತ್ತು ಜನ ಬಂದು ದೂರು ಕೊಟ್ರೆ 2 ಸಾವಿರ ಜನರಿಗೆ ಗಾಂಜಾ ಪೂರೈಕೆ ಮಾಡದಂತೆ ಪೊಲೀಸರು ಕ್ರಮ ಕೈಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.